ಮುಂಬೈ: ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಖಂಡ, ಸಂಸದ ಸಂಜಯ್ ರಾವುತ್ ಅವರನ್ನು ಬಂಧಿಸಲಾಗಿದ್ದು, ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ಜೈಲಿನಲ್ಲಿದ್ದರೂ ಸಂಜಯ್ ರಾವತ್ ಪತ್ರಕರ್ತನಾಗಿ ಎಲ್ಲ ಸುದ್ದಿಗಳ ಮೇಲೆ ನಿಗಾ ಇಡುವುದರಲ್ಲಿ ನಿರತರಾಗಿದ್ದಾರೆ. ಅಲ್ಲದೇ, ಪುಸ್ತಕಗಳನ್ನ ಓದುವುದರಲ್ಲಿ, ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸಂಜಯ್ ರಾವತ್ ಅವರನ್ನು ಪ್ರತ್ಯೇಕ ಬ್ಯಾರಕ್‌ನಲ್ಲಿ ಇರಿಸಲಾಗಿದೆ. ಅದೇ ರೀತಿ ಅವರಿಗೆ ಅನುಮತಿ ಮೇರೆಗೆ ನೋಟ್ ಬುಕ್, ಪೆನ್ನು ನೀಡಲಾಗಿದೆ. ಅದರಂತೆ ಜೈಲಿನಲ್ಲಿಯೂ ಬರೆಯುವುದನ್ನು ನಿಲ್ಲಿಸದೇ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮನೆ ಊಟಕ್ಕೆ ಅನುಮತಿ: ಪತ್ರಾ ಪುನರಾಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಬಂಧನಕ್ಕೊಳಗಾಗಿ ಆರ್ಥರ್ ಜೈಲಿನಲ್ಲಿರುವ ಸಂಸದ ಸಂಜಯ್ ರಾವತ್, ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ನ್ಯಾಯಾಲಯವು ಮನೆಯ ಊಟ ಮತ್ತು ಔಷಧಿಗೆ ಅನುಮತಿ ನೀಡಿದೆ. ಅದರಂತೆ ಸಂಜಯ್ ರಾವತ್ ಅವರಿಗೆ ಮನೆಯಲ್ಲೇ ತಯಾರಿಸಿದ ಊಟ ನೀಡಲಾಗುತ್ತಿದೆ.
ಜೈಲು ಆಡಳಿತದ ನಿಯಮಗಳ ಪ್ರಕಾರ, ಮನೆಯಲ್ಲಿ ಬೇಯಿಸಿದ ಆಹಾರವನ್ನು ಸಂಜೆ 5 ಗಂಟೆಯ ಮೊದಲು ಜೈಲಿಗೆ ಕಳುಹಿಸಬೇಕು. ಅದರಂತೆ, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಭೋಜನವನ್ನು ಭಾಂಡಪ್‌ನಲ್ಲಿರುವ ಅವರ ಮೈತ್ರಿ ನಿವಾಸದಿಂದ ಸಂಜಯ್ ರಾವತ್ ಅವರಿಗೆ ಕಳುಹಿಸಲಾಗುತ್ತದೆ. ಸಂಜಯ್ ರಾವುತ್ ಬೆಳಗ್ಗೆ 9 ರಿಂದ 9.30 ರ ನಡುವೆ ಉಪಹಾರ ಸೇವಿಸಿ. ಮಧ್ಯಾಹ್ನ 1 ರಿಂದ 2 ಗಂಟೆಗೆ ಊಟ ಮಾಡುತ್ತಾರೆ. 7 ರಿಂದ 7.30ರೊಳಗೆ ರಾತ್ರಿ ಊಟ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.
ಪತ್ರಕರ್ತ ಸಂಜಯ್ ರಾವತ್: ಸಂಜಯ್ ರಾವತ್ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಅಲಿಬಾಗ್‌ನ ಚೌಂದಿ ಎಂಬ ಗ್ರಾಮದವರು. ಎಂಬತ್ತರ ದಶಕದಲ್ಲಿ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನಲ್ಲಿ ಪತ್ರಿಕಾ ಪ್ರಸರಣ ಮತ್ತು ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಲೋಕಪ್ರಭ ವಾರ ಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಕೆಲಸ ಮಾಡ ತೊಡಗಿದರು.
ಅಲ್ಲಿಂದ ಸಂಜಯ್ ರಾವತ್ ಪ್ರಜ್ವಲಿಸಲು ಆರಂಭಿಸಿದರು. ಅವರ ಕ್ರೈಂ ರಿಪೋರ್ಟಿಂಗ್ ಬಹಳ ಹೆಸರು ಮಾಡಿತು. ಲೋಕಸತ್ತಾ ದಿನಪತ್ರಿಕೆಯಲ್ಲಿ ಅವರ ವರದಿಗಳು ಪ್ರಕಟವಾಗತೊಡಗಿದವು. ಅನೇಕ ತನಿಖಾ ವರದಿಗಳನ್ನು ಬರೆದರು. ಬಹಳ ದಿಟ್ಟ ಪತ್ರಕರ್ತರೆಂದು ಹೆಸರು ಮಾಡಿದರು. ಅನೇಕ ರಾಜಕಾರಣಿಗಳು, ಭೂಗತಲೋಕದ ಪಾತಕಿಗಳನ್ನೂ ಅವರು ಬಿಡುತ್ತಿರಲಿಲ್ಲ.
ಏನಿದು 'ಪತ್ರಾ ಚಾಲ್' ಭೂ ಹಗರಣ: ಮುಂಬೈನ ಗೋರೆಗಾಂವ್‌ನಲ್ಲಿರುವ ಸಿದ್ಧಾರ್ಥ್ ನಗರ, ಇದನ್ನು ಪತ್ರಾ ಚಾಲ್ ಎಂದೂ ಕರೆಯುತ್ತಾರೆ. ಇದು 47 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಪತ್ರಾ ಚಾಲ್‌ನ ಪುನರಾಭಿವೃದ್ಧಿಯಲ್ಲಿನ ರಿಗ್ಗಿಂಗ್ ಕುರಿತು ಇಡಿ ತನಿಖೆ ನಡೆಸುತ್ತಿದೆ. 2008 ರಲ್ಲಿ, ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (MHADA) ಪತ್ರಾ ಚಾಲ್‌ನ ಪುನರಾಭಿವೃದ್ಧಿಯ ಕೆಲಸವನ್ನು ಪ್ರಾರಂಭಿಸಿತು. ಇದು 672 ಬಾಡಿಗೆದಾರರನ್ನು ಹೊಂದಿತ್ತು. ಪುನರಾಭಿವೃದ್ಧಿಯ ಗುತ್ತಿಗೆಯನ್ನು ಗುರು ಆಶಿಶ್ ಕನ್ಸ್ಟ್ರಕ್ಷನ್ ಲಿಮಿಟೆಡ್‌ಗೆ ನೀಡಲಾಯಿತು.
14 ವರ್ಷಗಳ ನಂತರವೂ ಬಾಡಿಗೆದಾರರು ತಮ್ಮ ಮನೆಗಳನ್ನು ಮರಳಿ ಪಡೆಯಲು ಕಾಯುತ್ತಿದ್ದಾರೆ. ಈ ಜಾಗವನ್ನು ಫ್ಲ್ಯಾಟ್ ನಿರ್ಮಿಸದೇ ಒಂಬತ್ತು ಬಿಲ್ಡರ್‌ಗಳಿಗೆ 901.79 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಮೂಲಕ ನಿರ್ಮಾಣ ಸಂಸ್ಥೆ ಅಕ್ರಮವಾಗಿ 1,034.79 ಕೋಟಿ ರೂ. ಗಳಿಸಿದೆ. ಈ ವಿಷಯದಲ್ಲಿ ಅಂದಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರವನ್ನು ತೀವ್ರವಾಗಿ ಟೀಕಿಸಿದರು. ಇದಕ್ಕೆ ಕಾರಣರಾದ ಕಾರ್ಯಪಾಲಕ ಇಂಜಿನಿಯರ್ ಅವರನ್ನು ನಂತರ ಅಮಾನತುಗೊಳಿಸಲಾಗಿತ್ತು.
ಇದನ್ನೂ ಓದಿ: ಪತ್ರಾ ಚಾಲ್ ಭೂ ಹಗರಣ: ಆಗಸ್ಟ್ 4 ರವರೆಗೆ ಸಂಜಯ್ ರಾವತ್ ಇಡಿ ವಶಕ್ಕೆ