ಮುಂಬೈ (ಮಹಾರಾಷ್ಟ್ರ): ಗುಜರಾತ್ ಮೂಲದ ಔಷಧ ಕಂಪನಿಯ ಸ್ಟರ್ಲಿನ್ ಬಯೋಟೆಕ್ ಸಮೂಹವನ್ನೊಳಗೊಂಡ ಹಣ ವರ್ಗಾವಣೆ ಪ್ರಕರಣದಲ್ಲಿ ನಟರಾದ ಡಿನೋ ಮೊರಿಯಾ ಮತ್ತು ಸಂಜಯ್ ಖಾನ್ ಮತ್ತು ಡಿಜೆ ಅಕೀಲ್ ಅವರ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಹಣ ವರ್ಗಾವಣೆ ತಡೆ ಕಾಯ್ದೆಯಡಿ ನಾಲ್ಕು ಜನರಿಗೆ ಸೇರಿದ ಒಟ್ಟು 8.79 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲು ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ ಎಂದು ಇಡಿ ಹೇಳಿದೆ.
ಪರಾರಿಯಾಗಿದ್ದ ಸ್ಟರ್ಲಿಂಗ್ ಬಯೋಟೆಕ್ ಗುಂಪಿನ ಪ್ರವರ್ತಕರಾದ ನಿತಿನ್ ಸಂದೇಸರ ಮತ್ತು ಚೇತನ್ ಸಂದೇಸರ ಅವರ ಆದಾಯವನ್ನು ನಾಲ್ಕು ಜನರಿಗೆ ಹಂಚಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ನಿತಿನ್ ಸಂದೇಸರ, ಚೇತನ್ ಸಂದೇಸರ, ಚೇತನ್ ಪತ್ನಿ ದೀಪ್ತಿ ಸಂದೇಸರ ಮತ್ತು ಹಿತೇಶ್ ಪಟೇಲ್ ಅವರನ್ನು ವಿಶೇಷ ನ್ಯಾಯಾಲಯ ಪರಾರಿಯಾಗಿರುವ ಅಪರಾಧಿಗಳೆಂದು ಘೋಷಿಸಿದೆ.
ಮನಿ ಲಾಂಡರಿಂಗ್ ಪ್ರಕರಣವು ಸ್ಟರ್ಲಿಂಗ್ ಬಯೋಟೆಕ್ ಮತ್ತು ಅದರ ಮುಖ್ಯ ಪ್ರವರ್ತಕರು ಮತ್ತು ನಿರ್ದೇಶಕರು ಮಾಡಿದ 14,500 ಕೋಟಿ ರೂ.ಗಳ ಬ್ಯಾಂಕ್-ಸಾಲದ ವಂಚನೆಗೆ ಸಂಬಂಧಿಸಿದೆ.