ಮುಂಬೈ(ಮಹಾರಾಷ್ಟ್ರ): ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮೇಲೆ ಕ್ರೂಸ್ ಶಿಪ್ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕ್ಕೆ ಬೇಡಿಕೆಯಿಟ್ಟ ಆರೋಪ ಕೇಳಿ ಬಂದ ನಂತರ ಸಮೀರ್ ವಾಂಖೆಡೆ ತಂದೆ ಜ್ಞಾನದೇವ್ ವಾಂಖೆಡೆ ಅವರು ನವಾಬ್ ಮಲಿಕ್ ವಿರುದ್ಧ ಹರಿಹಾಯ್ದಿದ್ದರು. ಈಗ ಸಮೀರ್ ಸಹೋದರಿ ಯಾಸ್ಮಿನ್ ವಾಂಖೆಡೆ ಅವರು ಮಲಿಕ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆನ್‌ಲೈನ್‌ನಲ್ಲಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಯಾಸ್ಮಿನ್ ವಾಂಖೆಡೆ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಮಹಿಳಾ ಆಯೋಗಕ್ಕೆ ಪತ್ರ ಬರೆದಿರುವ ಅವರು ಇತ್ತೀಚೆಗೆ ಆಡಳಿತಾರೂಢ ರಾಜ್ಯ ಸರ್ಕಾರದ ಸಂಪುಟ ಖಾತೆ ಸಚಿವ ನವಾಬ್ ಮಲಿಕ್ ಅವರು ನನ್ನ ಸಹೋದರ ಮತ್ತು ನನ್ನ ಕುಟುಂಬ ಸದಸ್ಯರ ವಿರುದ್ಧ ಹಲವಾರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ನವಾಬ್ ಮಲಿಕ್ ನನ್ನನ್ನು ಮತ್ತು ನನ್ನ ಕುಟುಂಬಸ್ಥರನ್ನು ಆನ್‌ಲೈನ್‌ನಲ್ಲಿ ನಿಂದಿಸುವ ಮಟ್ಟಕ್ಕೆ ತೆರಳಿದ್ದಾರೆ ಎಂದು ದೂರಿದ್ದಾರೆ.
ಖಾಸಗಿತನಕ್ಕೆ ಧಕ್ಕೆ: ಇದರ ಜೊತೆಗೆ ನನ್ನ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಇತ್ಯಾದಿಗಳಿಂದ ನನ್ನ ವೈಯಕ್ತಿಕ ಫೋಟೋಗಳನ್ನು ಅಕ್ರಮವಾಗಿ ತೆಗೆದುಕೊಳ್ಳುತ್ತಿದ್ದು, ವೈಯಕ್ತಿಕ ಭಾವಚಿತ್ರಗಳನ್ನು ಮಾಧ್ಯಮಗಳಲ್ಲಿ ಸೋರಿಕೆ ಮಾಡುವ ಬೆದರಿಕೆ ಹಾಕಲಾಗಿದೆ. ನನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಂಬಾಲಿಸುವುದು ಮಾತ್ರವಲ್ಲದೇ, ನನ್ನ ಖಾಸಗಿತನಕ್ಕೆ ಧಕ್ಕೆಯಾಗಲು ನವಾಬ್ ಮಲಿಕ್ ಹೊಣೆಗಾರರಾಗಿದ್ದಾರೆ ಎಂದು ಯಾಸ್ಮಿನ್ ಪತ್ರದಲ್ಲಿ ಆರೋಪಿಸಿದ್ದಾರೆ.
'ತನಿಖೆ ಹಳಿ ತಪ್ಪಿಸುವ ಪ್ರಯತ್ನ': ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ನಡೆಸುತ್ತಿರುವ ತನಿಖೆಯನ್ನು ಹಳಿತಪ್ಪಿಸುವ ಪ್ರಯತ್ನವನ್ನು ನವಾಬ್ ಮಲಿಕ್ ನಡೆಸುತ್ತಿದ್ದಾರೆ. ಇದರಿಂದ ನಮ್ಮ ಮೇಲೆ ಬೆದರಿಕೆ ಹಾಗೂ ಒತ್ತಡ ಹಾಕುತ್ತಿದ್ದಾರೆ. ಇಂಥ ವ್ಯಕ್ತಿಯ ವಿರುದ್ಧ ತಕ್ಷಣವೇ ದೂರು ದಾಖಲಿಸಿಕೊಂಡು, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಯಾಸ್ಮಿನ್ ವಾಂಖೆಡೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕ್ರೂಸ್ ಶಿಪ್ ಡ್ರಗ್ಸ್ ಕೇಸ್: 4 ಗಂಟೆ ಸಮೀರ್ ವಾಂಖೆಡೆ ವಿಚಾರಣೆ, ಹೇಳಿಕೆ ದಾಖಲು