ಗೋರಖ್‌ಪುರ: ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ರಾಮಚರಿತ ಮಾನಸ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನಂತರ ರಾಮಚರಿತ ಮಾನಸ ಗ್ರಂಥದ ಮಾರಾಟ ಹೆಚ್ಚಾಗಿದೆ. ಈ ಕುರಿತು ಮಾಹಿತಿ ನೀಡಿದ ಗೀತಾ ಪ್ರೆಸ್ ಗೋರಖ್‌ಪುರ ಪ್ರಾಡಕ್ಟ್ ಮ್ಯಾನೇಜರ್ ಲಾಲ್ ಮಣಿ ತಿವಾರಿ, ವಿವಾದದ ನಂತರ ರಾಮಚರಿತ ಮಾನಸದ ಮಾರಾಟದಲ್ಲಿ ಹೆಚ್ಚಳವಾಗಿದೆ. ಬೇಡಿಕೆ ಪೂರೈಸಲು ನಮಗೆ ಸಾಧ್ಯವಾಗುತ್ತಿಲ್ಲ. ವರ್ಷದಲ್ಲಿ ಒಂಬತ್ತು ಭಾಷೆಗಳಲ್ಲಿ ಸುಮಾರು 5 ಲಕ್ಷ ರಾಮಚರಿತ ಮಾನಸ ಗ್ರಂಥದ ಪ್ರತಿಗಳನ್ನು ಮುದ್ರಿಸುತ್ತೇವೆ ಎಂದರು.
ಧಾರ್ಮಿಕ ಗ್ರಂಥ ರಾಮಚರಿತ ಮಾನಸ ಕುರಿತು ನಡೆಯುತ್ತಿರುವ ವಿವಾದಾತ್ಮಕ ಹೇಳಿಕೆಗಳ ಕುರಿತು ಮಾತನಾಡಿದ ಗೀತಾ ಪ್ರೆಸ್ ಆಡಳಿತ ಮಂಡಳಿ, ರಾಮಚರಿತ ಮಾನಸವು ಸಮಾಜವನ್ನು ಒಗ್ಗೂಡಿಸುವ ಪುಸ್ತಕವಾಗಿದೆ. ಇದು ಸಮಾಜವನ್ನು ಒಡೆಯುವಂಥದ್ದಲ್ಲ. ಇಂತಹ ಹೇಳಿಕೆಗಳು ಅಗ್ಗದ ಜನಪ್ರಿಯತೆಯನ್ನು ತರುತ್ತವೆ ಹೊರತು ಬೇರೇನೂ ಅಲ್ಲ. ಇಂತಹ ಹೇಳಿಕೆ ನೀಡುವುದರಿಂದ ಹೇಳಿಕೆ ನೀಡುವ ವ್ಯಕ್ತಿಗಾಗಲಿ ಅಥವಾ ಆತನ ರಾಜಕೀಯ ಪಕ್ಷಕ್ಕಾಗಲಿ ಯಾವುದೇ ಲಾಭವಾಗುವುದಿಲ್ಲ ಎಂದಿದ್ದಾರೆ.
ಅಲ್ಲದೇ ಇಂಥ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಹೆಚ್ಚು ಗಮನ ಹರಿಸುವ ಅಗತ್ಯವಿಲ್ಲ. ಇಂತಹ ಹೇಳಿಕೆಗಳನ್ನು ನೀಡುವುದರಿಂದ ನಾಯಕರು ತಮಗೆ ಮತ್ತು ತಮ್ಮ ಪಕ್ಷಕ್ಕೆ ಹಾನಿ ಮಾಡುತ್ತಾರೆ. ಇಂಥ ವಿವಾದಾತ್ಮಕ ಮಾತುಗಳ ನಂತರ ಪುಸ್ತಕದ ಮಾರಾಟ ಹೆಚ್ಚಾಗಿದೆ ಅಂದ ಮೇಲೆ ಈ ಪುಸ್ತಕದ ಮಹತ್ವ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದರು ಲಾಲ್ ಮಣಿ ತಿವಾರಿ.
ರಾಮಚರಿತ ಮಾನಸ ಗ್ರಂಥದ ಕುರಿತು ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹಿಂದೂ ಧರ್ಮಗ್ರಂಥ ರಾಮಚರಿತ ಮಾನಸ ಅನ್ನು ಮನುಸ್ಮೃತಿಯಂತೆ ಸುಡಬೇಕು. ಏಕೆಂದರೆ ಅದು ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ ಎಂದು ಅವರು ಹೇಳಿದ್ದರು. ಪಾಟ್ನಾದ ಬಾಪು ಸಭಾಂಗಣದಲ್ಲಿ ನಡೆದ ನಳಂದ ಮುಕ್ತ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವದಲ್ಲಿ ಬಿಹಾರದ ರಾಜ್ಯಪಾಲ ಫಾಗು ಚೌಹಾಣ್ ಅವರ ಸಮ್ಮುಖದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ರಾಮಚರಿತ ಮಾನಸವು ಸಮಾಜದಲ್ಲಿ ದ್ವೇಷವನ್ನು ಹರಡುವ ಪುಸ್ತಕವಾಗಿದೆ. ಇದು ದಲಿತರು, ಹಿಂದುಳಿದವರು ಮತ್ತು ಮಹಿಳೆಯರು ಓದುವುದನ್ನು ಮತ್ತು ಅವರು ಹಕ್ಕುಗಳನ್ನು ಪಡೆಯುವುದನ್ನು ತಡೆಯುತ್ತದೆ. ಮನುಸ್ಮೃತಿ ಸಮಾಜದಲ್ಲಿ ದ್ವೇಷದ ಬೀಜಗಳನ್ನು ಬಿತ್ತಿತು. ರಾಮಚರಿತ ಮಾನಸ ಸಮಾಜದಲ್ಲಿ ದ್ವೇಷವನ್ನೂ ಹುಟ್ಟುಹಾಕಿದೆ. ಗುರು ಗೋಳ್ವಾಲ್ಕರ್ ಅವರ ಚಿಂತನೆಗಳು ಸಮಾಜದಲ್ಲಿ ದ್ವೇಷವನ್ನು ಹರಡುತ್ತಿವೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟರು, ಏಕೆಂದರೆ ಅದು ದಲಿತರು ಮತ್ತು ಹಿಂದುಳಿದವರ ಹಕ್ಕುಗಳನ್ನು ಕಸಿದುಕೊಳ್ಳುವ ಬಗ್ಗೆ ಮಾತನಾಡುತ್ತದೆ ಎಂದು ಸಚಿವರು ಹೇಳಿದರು.
ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಕೂಡ ರಾಮಚರಿತ ಮಾನಸ ಗ್ರಂಥದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ರಾಮಚರಿತ ಮಾನಸ ಮಹಾಕಾವ್ಯದ ಕೆಲವು ಭಾಗಗಳು ಜಾತಿಯ ಆಧಾರದ ಮೇಲೆ ಸಮಾಜದ ದೊಡ್ಡ ವರ್ಗವನ್ನು ಅವಮಾನಿಸುತ್ತವೆ ಮತ್ತು ಅದನ್ನು ನಿಷೇಧಿಸಬೇಕು ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಉತ್ತರ ಪ್ರದೇಶದ ಮದರಸಾಗಳಲ್ಲಿ ಸಂವಿಧಾನ ವಿಷಯ ಬೋಧನೆ: ದಾರುಲ್ ಉಲೂಮ್ ನಿರ್ಧಾರ