ಸಾಗರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಸಾಗರ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳು ನಮಾಜ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದು ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಇದರ ತನಿಖೆಗಾಗಿ ರಚಿಸಿದ್ದ ಸಮಿತಿ ಮುಂದೆ ವಿದ್ಯಾರ್ಥಿನಿ ತಮ್ಮ ತಪ್ಪು ಒಪ್ಪಿಕೊಂಡಿದ್ದಾಳೆ.
ಶಿಕ್ಷಣ ವಿಭಾಗದ ಕೊಠಡಿಯೊಂದರಲ್ಲಿ ವಿದ್ಯಾರ್ಥಿನಿ ಹಿಜಾಬ್ ಧರಿಸಿದ ನಮಾಜ್ ಮಾಡಿದ್ದಳು. ಇದರ ವಿಡಿಯೋ ಮಾ.25ರಂದು ವೈರಲ್ ಆಗಿತ್ತು. ಹೀಗಾಗಿ ಬಲಪಂಥೀಯ ಸಂಘಟನೆಯವರು ಆಕ್ರೋಶ ಹೊರ ಹೊರಹಾಕಿದ್ದರು. ಆದ್ದರಿಂದ ಕುಲಪತಿ ಪ್ರೊಫೆಸರ್ ನಿಲೀಮಾ ಗುಪ್ತಾ ಈ ಘಟನೆಯ ತನಿಖೆಗಾಗಿ ಆರು ಸದಸ್ಯರ ಸಮಿತಿ ಕೂಡಾ ರಚಿಸಿದ್ದರು. ತನಿಖಾ ಸಮಿತಿಯು ತನ್ನ ವರದಿಯನ್ನು ಮಾ.31ರಂದು ಸಲ್ಲಿಸಿದೆ.
ತನಿಖಾ ಸಮಿತಿಯ ಮುಂದೆ ವಿದ್ಯಾರ್ಥಿನಿ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ. ನನ್ನ ಅಜ್ಞಾನದಿಂದ ಈ ರೀತಿಯ ತಪ್ಪಾಗಿದೆ ಎಂದು ಸಮಿತಿಯ ಮುಂದೆ ಹೇಳಿದ್ದಾಳೆ. ಅಲ್ಲದೇ, ಇನ್ನುಂದೆ ಅಂತಹದ್ದನ್ನೆಲ್ಲ ಮಾಡುವುದಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಇತ್ತ, ಕುಲಸಚಿವ ಸಂತೋಷ ಸೊಗಗೌರ ಕೂಡ ಹೊಸ ಅಧಿಸೂಚನೆ ಹೊರಡಿಸಿದ್ದಾರೆ. ಕ್ಯಾಂಪಸ್‌ನಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಬೇರೆ ಯಾವುದೇ ಚಟುವಟಿಕೆಗಳನ್ನು ನಡೆಸಬಾರದು. ಧಾರ್ಮಿಕ ಆಚರಣೆಗಳನ್ನು ತಮ್ಮ ಮನೆ ಅಥವಾ ಇತರ ಸ್ಥಳಗಳಲ್ಲಿ ಮಾಡಬೇಕು. ಇದನ್ನು ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಾಳಗದಲ್ಲಿ ಗೂಳಿ ಸಾವು: ಶಿವಸೇನೆ ಮುಖಂಡ ಸೇರಿ 12 ಮಂದಿ ವಿರುದ್ಧ ಕೇಸ್