ಭೋಪಾಲ್: ಸಾಗರದಲ್ಲಿ 72 ಗಂಟೆಗಳ ಅವಧಿಯಲ್ಲಿ ಒಂದರ ಹಿಂದೊಂದರಂತೆ 3 ಕೊಲೆ ಮಾಡಿ ಸಂಚಲನ ಮೂಡಿಸಿದ್ದ ಸರಣಿ ಹಂತಕನನ್ನು ಸಾಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಾಗರದಲ್ಲಿ ಮಾತ್ರವಲ್ಲದೇ ಭೋಪಾಲ್‌ನ ಬೈರಾಗರ್‌ನಲ್ಲಿಯೂ ಮಾರ್ಬಲ್ ಅಂಗಡಿಯ ವಾಚ್‌ಮನ್‌ನನ್ನು ಕೊಂದಿದ್ದರು. ಮೊಬೈಲ್ ಸ್ಥಳ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ನಂತರ ಪೊಲೀಸರು ಆರೋಪಿಯನ್ನು ಭೋಪಾಲ್‌ನಲ್ಲಿ ಬಂಧಿಸಿದ್ದಾರೆ.
ನಾಲ್ಕೂ ಪ್ರಕರಣಗಳಲ್ಲಿ ಅಪರಾಧದ ರೀತಿ ಒಂದೇ ಆಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಬಂಧಿತ ಆರೋಪಿ ಸೆಕ್ಯೂರಿಟಿ ಗಾರ್ಡ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದು, ರಾತ್ರಿ ಮಲಗಿದ್ದ ಕಾವಲುಗಾರನ ತಲೆಗೆ ಹೊಡೆದು ಕೊಲೆ ಮಾಡುತ್ತಿದ್ದನು. ಪೊಲೀಸ್ ತನಿಖೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರ ಮೊಬೈಲ್ ಹಾಗೂ ಹಣ ನಾಪತ್ತೆಯಾಗಿರುವುದು ಪತ್ತೆಯಾಗಿತ್ತು.
ಹಾಗಾಗಿ ಅಂದಿನಿಂದ ಪೊಲೀಸರು ಮೊಬೈಲ್ ಲೊಕೇಶನ್ ಆಧಾರದ ಮೇಲೆ ಆರೋಪಿಗಾಗಿ ಶೋಧ ನಡೆಸಿದ್ದರು. ಮೊಬೈಲ್ ಲೊಕೇಶನ್ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿ ಭೋಪಾಲ್ ತಲುಪಿರುವ ಮಾಹಿತಿ ಸಾಗರ ಪೊಲೀಸರಿಗೆ ಸಿಕ್ಕಿದೆ. ಆರೋಪಿಗೆ ಬಲೆ ಬೀಸಿದ ಪೊಲೀಸರು ಭೋಪಾಲ್‌ನಲ್ಲಿ ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಭೋಪಾಲ್‌ನ ಬೈರಾಗರ್‌ನಲ್ಲಿ ವಾಚ್‌ಮನ್‌ನನ್ನು ಇದೇ ರೀತಿಯಲ್ಲಿ ಕೊಂದಿರುವುದು ತಿಳಿದು ಬಂದಿದೆ.
72 ಗಂಟೆಗಳಲ್ಲಿ ಸಾಗರದಲ್ಲಿ ಮೂರು ಕೊಲೆ: ಆಗಸ್ಟ್ 28ರಂದು ನಗರದ ಕೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಭೈಂಸಾ ಗ್ರಾಮದ ಕಾರ್ಖಾನೆಯೊಂದರ ಕಾವಲುಗಾರ ಕಲ್ಯಾಣ್ ಲೋಧಿ ಅವರ ತಲೆಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಲಾಗಿತ್ತು. ಆಗಸ್ಟ್ 29ರ ರಾತ್ರಿ, ನಗರದ ಮೋತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಟೋನಾ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯೊಂದರ ಕಾವಲು ಕಾಯುತ್ತಿದ್ದ ಸಾಗರದ ಸಂತ ರವಿ ನಗರ ವಾರ್ಡ್‌ನ ನಿವಾಸಿ ಮೋತಿಲಾಲ್ ಅಹಿರ್ವಾರ್ ಅವರನ್ನು ಅದೇ ರೀತಿಯಲ್ಲಿ ಹತ್ಯೆ ಮಾಡಲಾಗಿತ್ತು.
ಆಗಸ್ಟ್ 30ರ ಮಂಗಳವಾರ ರಾತ್ರಿ ನಗರದ ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಾಚ್‌ಮನ್ ಆಗಿದ್ದ ಶಂಭುದಯಾಳ್ ದುಬೆ ಅವರನ್ನು ಈ ರೀತಿ ಹತ್ಯೆ ಮಾಡಲಾಗಿತ್ತು. ಶಂಭು ದಯಾಳ್ ದುಬೆ ಅವರ ತಲೆಯ ಮೇಲೆ ಕಲ್ಲಿನಲ್ಲಿ ಹೊಡೆದು ಕೊಲೆ ಮಾಡಲಾಗಿದೆ.
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಮಾತನಾಡಿ, ಆರೋಪಿಯನ್ನು ಬಂಧಿಸಿದ್ದು, ಹೆಸರು ಶಿವಪ್ರಸಾದ್ ಎಂದು ತಿಳಿಸಿದ್ದಾರೆ. ಈತ ಸಾಗರ್ ಜಿಲ್ಲೆಯ ಕೆಸ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ. ಆರೋಪಿ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಮೊಬೈಲ್ ಹಾಗೂ ಹಣ ದೋಚುವ ಉದ್ದೇಶದಿಂದ ಕೊಲೆ ಮಾಡುತ್ತಿದ್ದನು ಎಂದು ಹೇಳಿದರು. ಆರೋಪಿಯನ್ನು ಬಂಧಿಸುವಲ್ಲಿನ ಪೊಲೀಸರ ಕಾರ್ಯಕ್ಕಾಗಿ ಗೃಹ ಸಚಿವ ಸಾಗರ ಪೊಲೀಸರನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ: ನಿಠಾರಿ ಕೇಸ್: ಸರಣಿ ಹಂತಕ ಸುರೇಂದ್ರ ಕೋಲಿಗೆ 13ನೇ ಬಾರಿಗೆ ಮರಣದಂಡನೆ