ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೌನ್ ವಿಶ್ವವಿದ್ಯಾಲಯ ಆಯೋಜಿಸಿದ್ದ ಆನ್‌ಲೈನ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸದ್ದಾಂ ಹುಸೇನ್ ಮತ್ತು ಲಿಬಿಯಾದ ಸರ್ವಾಧಿಕಾರಿ ಮುಹಮ್ಮರ್ ಗಡಾಫಿ ಹಾಗೆಯೇ ಸರ್ವಾಧಿಕಾರಿ ಧೋರಣೆ ಅನುಸರಿಸುವ ಮೂಲಕ ಚುನಾವಣೆಯಲ್ಲಿ ಜಯಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
2020ರಲ್ಲಿ ಭಾರತದಲ್ಲಿ ಪ್ರಮುಖ ಬದಲಾವಣೆಯನ್ನು ಗುರುತಿಸಲಾಗಿದೆ. ಭಾರತವು ಸ್ವತಂತ್ರ ಪ್ರಜಾಪ್ರಭುತ್ವದಿಂದ ಚುನಾವಣಾ ನಿರಂಕುಶತತೆಗೆ ಜಾರುತ್ತಿದೆ ಎಂದು ಸ್ವೀಡನ್ ಮೂಲದ ವೆರೈಟೀಸ್ ಆಫ್ ಡೆಮಾಕ್ರಸಿ (ವಿ-ಡೆಮ್) ಸಂಸ್ಥೆಯ ವರದಿ ತಿಳಿಸಿದೆ. ಜೊತೆಗೆ ಭಾರತ ಸರ್ಕಾರವು ಫ್ರೀಡಂ ಹೌಸ್ ನೀಡಿದ ವರದಿಯನ್ನು ನಿರ್ಲಕ್ಷಿಸಲಾಗಿದೆ. ಈ ವರದಿಯು ಭಾರತದ ಸ್ಥಾನಮಾನವನ್ನು 'ಮುಕ್ತ' ದೇಶದಿಂದ 'ಭಾಗಶಃ ಮುಕ್ತ'ಕ್ಕೆ ಬದಲಾಯಿಸಿತು. ಈ ಹಿನ್ನೆಲೆ ಇದು ದಾರಿತಪ್ಪಿಸುವ, ತಪ್ಪಾದ ವರದಿ ಎಂದು ಕೇಂದ್ರ ಸರ್ಕಾರ ನಿರಾಕರಿಸಿದೆ ಎಂದರು.