ಅಮೃತಸರ, ಪಂಜಾಬ್ : ಅಮೃತಸರದಲ್ಲಿರುವ ಸ್ವರ್ಣ ಮಂದಿರದಲ್ಲಿ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಿ ಅಪವಿತ್ರಗೊಳಿಸಲು ಯತ್ನಿಸಿದ ಆರೋಪದಲ್ಲಿ ಯುವಕನೋರ್ವನನ್ನು ಅಲ್ಲಿನ ಶಿರೋಮಣಿ ಸಮಿತಿಯ ಸಿಬ್ಬಂದಿ ಮತ್ತು ಭಕ್ತರು ತಡೆದು ಹಲ್ಲೆ ನಡೆಸಿದ್ದಲ್ಲದೇ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ.
ಸ್ವರ್ಣ ಮಂದಿರಕ್ಕೆ ಬಂದಿದ್ದ ಯುವಕ, ಸ್ವಲ್ಪ ಸಮಯದ ನಂತರ ರೇಲಿಂಗ್ (ಕಬ್ಬಿಣದ ಸರಪಳಿ) ಅನ್ನು ದಾಟಿ, ಪ್ರಾರ್ಥನೆ ನಡೆಯುತ್ತಿದ್ದ ಗುರು ಗ್ರಂಥ ಸಾಹಿಬ್ ಬಳಿ ಬಂದಿದ್ದನು. ಈ ವೇಳೆ ಶಿರೋಮಣಿ ಸಮಿತಿಯ ಕಾರ್ಯಪಡೆ ಆತನನ್ನು ತಡೆದಿದೆ. ನಂತರ ಆತನನ್ನು ಕಚೇರಿಗೆ ಎಳೆದೊಯ್ದು ಹಲ್ಲೆ ನಡೆಸಿ, ಹತ್ಯೆ ಮಾಡಿದೆ.
ಸಂಜೆ 6 ಗಂಟೆ ಸುಮಾರಿಗೆ ಪೂಜೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯ ನಂತರ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸಿಖ್ರ ಗುರುಗ್ರಂಥ ಸಾಹಿಬ್ಗೆ ಯಾವುದೇ ಹಾನಿಯಾಗಿಲ್ಲ, ಅಪವಿತ್ರವಾಗಿಲ್ಲ ಎನ್ನಲಾಗಿದೆ.
ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತಪಟ್ಟ ವ್ಯಕ್ತಿ ಯಾರು? ಎಲ್ಲಿಂದ ಬಂದಿದ್ದಾನೆ ಎಂದು ತನಿಖೆ ನಂತರ ಗೊತ್ತಾಗಲಿದೆ. ಜನರು ಮತ್ತು ಧರ್ಮಗುರುಗಳ ಶಾಂತ ರೀತಿಯಲ್ಲಿ ಇರಬೇಕೆಂದು ವಿನಂತಿ ಮಾಡುತ್ತೇನೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಸುಖದೇವ್ ಸಿಂಗ್ ಹೇಳಿದ್ದಾರೆ.
ಸಂಜೆ ಪ್ರಾರ್ಥನೆಯ ಸಮಯದಲ್ಲಿ ಅಪಚಿರಿತ ವ್ಯಕ್ತಿಯೋರ್ವ ಸ್ವರ್ಣಮಂದಿರದೊಳಗೆ ಪ್ರವೇಶಿಸಿ, ಗೂರಜಿಯವರ ಖಡ್ಗವಾದ ಸಿರಿ ಸಾಹಿಬ್ ಅನ್ನು ತೆಗೆದುಕೊಂಡಿದ್ದಾನೆ. ಶಿರೋಮಣಿ ಸಮಿತಿಯ ಆತನನ್ನು ಹಿಡಿದು, ಹೊಡೆದು ಹತ್ಯೆ ಮಾಡಿದ್ದಾರೆ. ಈ ಕುರಿತು ಸಿಸಿಟಿವಿಯ ದೃಶ್ಯ ಪರಿಶೀಲನೆ ಮಾಡಲಾಗುತ್ತಿದೆ ಎಂದು ಡಿಸಿಪಿ ರಾಂಪಾಲ್ ಸಿಂಗ್ ಹೇಳಿದ್ದಾರೆ.
ಪಂಜಾಬ್ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಅವರು ಕೇಂದ್ರ ಸರ್ಕಾರ ಪ್ರತ್ಯೇಕ ಏಜೆನ್ಸಿ ರಚಿಸಿ ಈ ಪ್ರಕರಣವನ್ನು ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, ಇದೊಂದು ಅತ್ಯಂತ ಕೆಟ್ಟ ಘಟನೆಯಾಗಿದೆ. ಇಂತಹ ಘಟನೆಗಳ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕರಾಳ ರಾತ್ರಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ.. ಮನೆ ಮುಂದೆ ನಿಲ್ಲಿಸಿದ ವಾಹನಗಳ ಮೇಲೆ ಕಲ್ಲು ತೂರಾಟ..