ತಿರುವನಂತಪುರ: ಮಂಡಲ ಪೂಜಾ ಉತ್ಸವಕ್ಕಾಗಿ ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ಭಾನುವಾರ ತೆರೆಯಲಾಗಿದ್ದು, ಇಂದಿನಿಂದ ಭಕ್ತರಿಗೆ ಅಯ್ಯಪ್ಪನ ದರ್ಶನ ಭಾಗ್ಯ ದೊರೆಯಲಿದೆ.
ನಿನ್ನೆ ಸಂಜೆ ದೇವಸ್ಥಾನದ ಮುಖ್ಯ ಅರ್ಚಕ ಎ.ಕೆ. ಸುದೀರ್ ನಂಬೂದರಿ ದೇವಾಲಯದ ಗರ್ಭಗುಡಿ ಬಾಗಿಲನ್ನು ತಂತ್ರಿಗಳಾದ ಕಂಡರಾರು ರಾಜೀವರು ಅವರ ಸಮ್ಮುಖದಲ್ಲಿ ತೆರೆದಿದ್ದಾರೆ. ಶಬರಿಮಲೆಯ ನೂತನ ಮುಖ್ಯ ಅರ್ಚಕ ವಿ.ಕೆ ಜಯರಾಜ್ ಪೊಟ್ಟಿ ಮತ್ತು ಮಲಿಕಾಪ್ಪುರಂ ಮುಖ್ಯ ಅರ್ಚಕ ಎಂ.ಎನ್ ರಾಜಿಕುಮಾರ್ ದೇವಸ್ಥಾನಕ್ಕೆ ಆಗಮಿಸಿದ್ದರು. ಸಾಂಪ್ರದಾಯಿಕ ಪೂಜೆಗಳು ನೆರವೇರಿದ ಬಳಿಕ ಸ್ಥಳೀಯ ದೇವಸ್ಥಾನದ ಸಿಬ್ಬಂದಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲಿದ್ದಾರೆ. ಭಕ್ತರಿಗೆ ಇಂದಿನಿಂದ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಇಂದು ವೃಶ್ಚಿಕದ ಮೊದಲ ದಿನ ನೂತನ ಮುಖ್ಯ ಅರ್ಚಕ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಪೂಜಾ ವಿಧಾನಗಳನ್ನು ನೆರವೇರಿಸಲಿದ್ದಾರೆ. ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಒಂದು ದಿನಕ್ಕೆ ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೈಕೋರ್ಟ್ ಆದೇಶದ ಪ್ರಕಾರ, 750 ಯಾತ್ರಿಕರು ನಿಲಕ್ಕಲ್ನಲ್ಲಿ ಕಡಿಮೆ ದಿನಗಳ ಮಟ್ಟಿಗೆ ಉಳಿದುಕೊಳ್ಳಬಹುದು. ಆದರೆ ಪಂಪಾ ಮತ್ತು ಸನ್ನಿದಾನದಲ್ಲಿ ಭಕ್ತರಿಗೆ ಉಳಿದುಕೊಳ್ಳುವ ಅವಕಾಶವಿಲ್ಲ ಎಂದು ಕೇರಳ ಮುಜರಾಯಿ ಖಾತೆ ಸಚಿವ ಕಡಕಂಪಳ್ಳಿ ಸುರೇಂದ್ರನ್ ಮಾಹಿತಿ ನೀಡಿದ್ದಾರೆ.
ದೇವಸ್ಥಾನಕ್ಕೆ ಆಗಮಿಸುವ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಕಟ್ಟಾಯವಾಗಿದೆ. ಭಕ್ತರು ನೆಲದ ಮೇಲೆ ಗುರುತಿಸಿದ ಬಾಕ್ಸ್ನಲ್ಲಿ ನಿಂತು ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಸಾಗಬೇಕಿದೆ. 60-65 ವರ್ಷದೊಳಗಿನವರಿಗೆ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯವಾಗಿದೆ. ಶಬರಿಮಲೆ ದೇವಸ್ಥಾನಕ್ಕೆ ಹೋಗುವ 24 ಗಂಟೆಗೂ ಮುನ್ನ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ರಿಪೋರ್ಟ್ ನೆಗೆಟಿವ್ ಇದ್ದರೆ ಮಾತ್ರ ದೇವಾಲಯದ ಒಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.