ಬೆಂಗಳೂರು: ಭಾರತದ ರೂಪಾಯಿ ದರ ಪ್ರತಿ ಅಮೆರಿಕನ್ ಡಾಲರ್ಗೆ 80.06 ಯ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಈ ವರ್ಷ ಇಲ್ಲಿಯವರೆಗೆ ದೇಶದ ಇಕ್ವಿಟಿ ಮಾರುಕಟ್ಟೆಯಿಂದ 30 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಹೊರಗೆ ಹರಿದು ಹೋಗಿದ್ದು, ಕ್ಷೀಣಿಸುತ್ತಿರುವ ಚಾಲ್ತಿ ಖಾತೆ ಕೊರತೆಯ ಮಧ್ಯೆ ತೈಲ ಮತ್ತು ಸರಕುಗಳ ಬೆಲೆಗಳ ಹೆಚ್ಚಳದ ಕಾರಣಗಳಿಂದ ರೂಪಾಯಿ ಸಂಕಷ್ಟದಲ್ಲಿದೆ.
ಚಿನ್ನದ ಆಮದಿನ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದು ಸೇರಿದಂತೆ ಇನ್ನೂ ಹಲವಾರು ಕ್ರಮಗಳ ಮೂಲಕ ರೂಪಾಯಿ ಮೌಲ್ಯ ಕುಸಿತವನ್ನು ತಡೆಗಟ್ಟುವಂತೆ ಭಾರತದ ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ. ಇತರ ಅಭಿವೃದ್ಧಿಶೀಲ ದೇಶಗಳ ಮಾರುಕಟ್ಟೆಗಳ ಕರೆನ್ಸಿಗಳು ಸಹ ಅಮೆರಿಕದ ಫೆಡರಲ್ ರಿಸರ್ವ್‌ನ ಬಂಡವಾಳ ಆಕರ್ಷಣೆಯ ಬಿಸಿಯನ್ನು ಅನುಭವಿಸುತ್ತಿವೆ.
ಭಾರತದ ಚಾಲ್ತಿ ಖಾತೆ ಕೊರತೆಯಿಂದ ರೂಪಾಯಿ ಈ ವರ್ಷ ಶೇ 7ರಷ್ಟು ಕುಸಿದಿದೆ. ಬರುವ ಮಾರ್ಚ್ 31ರ ವೇಳೆಗೆ ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇ 2.9ಕ್ಕೆ ಹೆಚ್ಚಾಗಬಹುದು ಎಂದು ಜೂನ್ನಲ್ಲಿ ನಡೆದ ಸರ್ವೆ ವರದಿಯೊಂದು ಹೇಳಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಚಾಲ್ತಿ ಖಾತೆ ಕೊರತೆ ದುಪ್ಟಟ್ಟಾಗಬಹುದು.
ರೂಪಾಯಿ ಏರಿಳಿತವು ಕ್ರಮಬದ್ಧವಾಗಿರುವಂತೆ ನೋಡಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲ ಬಗೆಯ ಮಾರುಕಟ್ಟೆಗಳಲ್ಲಿ ಸೂಕ್ತ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕಳೆದ ತಿಂಗಳು ಹೇಳಿದ್ದರು.