ಅಹಮದಾಬಾದ್(ಗುಜರಾತ್): ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರೋದು ಅನೇಕ ಅಚ್ಚರಿಗಳಿಗೆ ಕಾರಣವಾಗಿದೆ. ಸುಮಾರು ಐದು ವರ್ಷಗಳ ಕಾಲ ಯಶಸ್ವಿಯಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ರೂಪಾನಿ ಇಂದು ಸಿಎಂ ಸ್ಥಾನಕ್ಕೆ ರಿಸೈನ್ ಮಾಡುತ್ತಿದ್ದಂತೆ ಅನೇಕ ರೀತಿಯ ಊಹಾಪೋಹಗಳು ಚರ್ಚೆಗೆ ಎಡೆ ಮಾಡಿಕೊಟ್ಟಿವೆ.
ಕೋವಿಡ್ ಪರಿಸ್ಥಿತಿ ನಿಭಾಯಿಸಲು ವಿಫಲ
ಕಳೆದ ಕೆಲ ತಿಂಗಳ ಹಿಂದೆ ರಾಜ್ಯದಲ್ಲಿ ಉದ್ಭವವಾಗಿದ್ದ ಎರಡನೇ ಹಂತದ ಕೊರೊನಾ ಪರಿಸ್ಥಿತಿ ನಿಭಾಯಿಸಲು ವಿಜಯ್ ರೂಪಾನಿ ಸಂಪೂರ್ಣವಾಗಿ ವಿಫಲವಾಗಿರುವ ಕಾರಣ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂಬ ಮಾತು ಕೇಳಿ ಬಂದಿವೆ. ಕೋವಿಡ್ ಸಂದರ್ಭದಲ್ಲಿ ಗುಜರಾತ್ನಲ್ಲಿ ನಡೆದ ಕೆಲ ಅಹಿತಕರ ಘಟನೆಗಳ ಕುರಿತಾಗಿ ಸುಪ್ರೀಂಕೋರ್ಟ್ ರೂಪಾನಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು.
ಮೃದು ಸ್ವಭಾವದ ಮುಖ್ಯಮಂತ್ರಿ
ವಿಜಯ್ ರೂಪಾನಿ ಮೃದು ಸ್ವಭಾವದ ಮುಖ್ಯಮಂತ್ರಿಯಾಗಿದ್ದು, ಅದೇ ಅವರನ್ನ ದುರ್ಬಲ ಸಿಎಂ ಎಂಬ ಖ್ಯಾತಿಗೆ ಎಡೆಮಾಡಿಕೊಟ್ಟಿತ್ತು ಎಂದು ಅನೇಕ ರಾಜಕೀಯ ವೀಕ್ಷಕರು ಮಾತನಾಡುತ್ತಿದ್ದಾರೆ. ಪ್ರಮುಖ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಅಧಿಕಾರಿಶಾಹಿ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು ಎನ್ನಲಾಗಿದೆ.
ಇದನ್ನೂ ಓದಿರಿ: Namo ನಾಡಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ... ರೂಪಾನಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ಯಾಕೆ!?
2016ರಲ್ಲಿ ಮೊದಲ ಬಾರಿಗೆ ಸಿಎಂ ಆಗುವುದಕ್ಕೂ ಮುಂಚಿತವಾಗಿ ರೂಪಾನಿ, ಗುಜರಾತ್ನಲ್ಲಿ ಪಕ್ಷ ಸಂಘಟನೆಯಲ್ಲಿ ಹೆಚ್ಚು ಕೆಲಸ ಮಾಡಿದ್ದರು. 2014ರಲ್ಲಿ ಮೊದಲ ಸಲ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಇವರು ರಾಜ್ಕೋಟ್ನ ಪಶ್ಚಿಮ ಕ್ಷೇತ್ರದಿಂದ(ಉಪಚುನಾವಣೆ) ಗೆಲುವು ಸಾಧಿಸಿದ್ದರು. 2006 ಮತ್ತು 2012ರ ಮಧ್ಯೆ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
2006ರಲ್ಲಿ ಗುಜರಾತ್ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್ ಅವರನ್ನೊಳಗೊಂಡ ಜಾಹೀರಾತು ಪ್ರಚಾರ 'ಖುಷ್ಬೂ ಗುಜರಾತ್ ಕಿ' ಎಂಬ ಶೀರ್ಷಿಕೆಯಡಿ ರಾಜ್ಯದಲ್ಲಿ ಪ್ರವಾಸೋದ್ಯಮದ ಪ್ರಚಾರ ಆರಂಭಿಸಿದ್ದರು.
2016ರಲ್ಲಿ ಅಂದಿನ ಸಿಎಂ ಆನಂದಿ ಬೆನ್ ಪಾಟಿದಾರ್ ಮತ್ತು ದಲಿತ ಆಂದೋಲನಗಳ ಅಸಮರ್ಪಕ ನಿರ್ವಹಣೆ ಆರೋಪದಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ರೂಪಾನಿ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ್ದರು.
ಆದರೆ, ಇದೀಗ ಸ್ವಪಕ್ಷೀಯ ಕೆಲ ಶಾಸಕರಿಂದ ಇವರ ಅಧಿಕಾರ ವೈಖರಿಗೆ ವಿರೋಧ ವ್ಯಕ್ತವಾಗಿದ್ದು, ಅದೇ ಕಾರಣದಿಂದಾಗಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.