ನವದೆಹಲಿ: ದೇಶೀಯ ವಿಮಾನಯಾನ ಸಂಸ್ಥೆಗಳು ಅಕ್ಟೋಬರ್ 18ರಿಂದ ಯಾವುದೇ ನಿರ್ಬಂಧಗಳಿಲ್ಲದೇ ಪ್ರಯಾಣಿಕ ವಿಮಾನಗಳ ಕಾರ್ಯಾಚರಣೆ ಮಾಡಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಆದೇಶಿಸಿದೆ.
ಕೋವಿಡ್ ಕಾರಣದಿಂದಾಗಿ ವಿಮಾನಗಳಲ್ಲಿ ಪ್ರಯಾಣಿಕರಿಗೆ ಮಿತಿ ಹೇರಲಾಗಿತ್ತು. ಆಸನಗಳ ಸಾಮರ್ಥ್ಯವನ್ನು ಕಡಿತಗೊಳಿಸಲಾಗಿತ್ತು. ಈಗ ವಿಮಾನ ಪ್ರಯಾಣಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಆಸನಗಳ ಸಾಮರ್ಥ್ಯ ಮಿತಿಯನ್ನು ಕೈಬಿಡಲಾಗಿದೆ ಎಂದು ವಿಮಾನಯಾನ ಸಚಿವಾಲಯ ಹೇಳಿದೆ.
ಆದರೂ ಕೂಡಾ ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳ ಆಪರೇಟರ್ಗಳು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ತಿಂಗಳ ಆರಂಭದಲ್ಲಿ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾದ ಐಸಿಆರ್‌ಎ ವರದಿ ನೀಡಿದ್ದು, ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ದೇಶೀಯ ವಿಮಾನಗಳಲ್ಲಿ ಪ್ರಯಾಣಿಕರ ಸಂಖ್ಯೆ 67 ಲಕ್ಷದಿಂದ 69ಕ್ಕೆ ಅಂದರೆ ಸುಮಾರು ಎರಡರಿಂದ ಮೂರು ಪರ್ಸೆಂಟ್ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದೆ.
ಕೋವಿಡ್ ಮಾರ್ಗಸೂಚಿಗಳ ಆರಂಭವಾದ ಬಳಿಕ ಎರಡು ತಿಂಗಳು ದೇಶಿಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದ್ದು, ನಂತರದಲ್ಲಿ ಕೇವಲ ಶೇಕಡಾ 33ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿತ್ತು. ಡಿಸೆಂಬರ್ ವೇಳೆ ಆಸನ ಸಾಮರ್ಥ್ಯ ಶೇ 80ರಷ್ಟಕ್ಕೆ ಏರಿಕೆಯಾಯಿತು.
ದೇಶದಲ್ಲಿ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಾಗ ಮತ್ತೆ ವಿಮಾನಗಳ ಆಸನ ಸಾಮರ್ಥ್ಯವನ್ನು ಶೇಕಡಾ 50ಕ್ಕೆ ಇಳಿಸಲಾಗಿತ್ತು. ಈಗ ಕೋವಿಡ್ ಪ್ರಮಾಣ ಇಳಿಕೆಯಾಗಿದ್ದು, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿರುವ ಕಾರಣದಿಂದ ಪ್ರಯಾಣಿಕರಿಗೆ ಯಾವುದೇ ಆಸನ ಮಿತಿಯಿಲ್ಲದೇ ದೇಶೀಯ ವಿಮಾನಗಳು ಕಾರ್ಯಾಚರಣೆ ನಡೆಸಲು ಅನುಮತಿ ನೀಡಲಾಗಿದೆ.
ಇದನ್ನೂ ಓದಿ: ರಾಜ್ಯಗಳು ಕೇಂದ್ರ ಸರ್ಕಾರದ ಸೂಚನೆ ಕಡೆಗಣಿಸಿದ್ದೇ ಕಲ್ಲಿದ್ದಲು ಕೊರತೆಗೆ ಕಾರಣವಾಯಿತೇ?