ಇಂದೋರ್(ಮಧ್ಯಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರಧಾರೆಗಳಿಂದ ಪ್ರೇರಿತನಾಗಿರುವ ಯುವಕನೋರ್ವ ತಾನು ಬಾಡಿಗೆ ಇರುವ ಮನೆಯಲ್ಲಿ ಅವರ ಭಾವಚಿತ್ರ ಹಾಕಿಕೊಂಡಿದ್ದಾನೆ. ಇದನ್ನು ಗಮನಿಸಿರುವ ಮನೆ ಮಾಲೀಕ ತಕ್ಷಣ ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದಿರುವ ಯುವಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಕಳೆದ ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಖುಶಿ ನಗರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ಮುಸ್ಲಿಂ ಯುವಕನೋರ್ವ ಸಿಹಿ ಹಂಚಿದ್ದನು. ಇದರ ಬೆನ್ನಲ್ಲೇ ಆತನ ಕೊಲೆಗೈದ ಘಟನೆ ನಡೆದಿತ್ತು. ಈ ಬೆನ್ನಲ್ಲೇ ಇಂದೋರ್ನಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ.
ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಯೂಸುಫ್ ಮನೆಯಲ್ಲಿ ಮೋದಿ ಫೋಟೋ ಹಾಕಿಕೊಂಡಿದ್ದ. ಆದರೆ, ಮನೆ ಮಾಲೀಕ ಯಾಕೂಬ್ ಆತನ ಮೇಲೆ ಒತ್ತಡ ಹೇರಿ ಫೋಟೋ ತೆಗೆದು ಹಾಕುವಂತೆ ಸೂಚಿಸಿದ್ದಾನೆ. ಇಲ್ಲವಾದರೆ ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದನಂತೆ.
ಇದನ್ನೂ ಓದಿ: ವಿಡಿಯೋ: ಒಂದಲ್ಲ, ಎರಡಲ್ಲ.. ಬರೋಬ್ಬರಿ 8 ಸಿಲಿಂಡರ್ಗಳ ಸ್ಫೋಟ!
ತಾಯಿಗೆ ಹೃದಯಾಘಾತ: ದೂರುದಾರನ ಪ್ರಕಾರ, ಮೋದಿ ಫೋಟೋ ಹಾಕಿದಾಗಿನಿಂದಲೂ ಮನೆ ಮಾಲೀಕ ತನಗೆ ಮತ್ತು ತನ್ನ ಕುಟುಂಬಕ್ಕೆ ಮೇಲಿಂದ ಮೇಲೆ ಬೆದರಿಕೆ ಹಾಕುತ್ತಿದ್ದನಂತೆ. ಈ ಬೆಳವಣಿಗೆಯಿಂದಲೇ ಕಳೆದ 8 ದಿನಗಳ ಹಿಂದೆ ತಾಯಿಗೆ ಹೃದಯಾಘಾತವಾಗಿದ್ದು, ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ ಎಂದಿದ್ದಾನೆ.