ಸೂರತ್ (ಗುಜರಾತ್): ಗುಜರಾತ್ ವಿಧಾನಸಭೆ ಚುನಾವಣೆ ಸಂಬಂಧ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 75 ಲಕ್ಷ ರೂಪಾಯಿ ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಹಣ ಕಾಂಗ್ರೆಸ್‌ಗೆ ಸೇರಿದ್ದು ಎನ್ನಲಾಗಿದ್ದು, ಇದರ ನಡುವೆ ಸಿಸಿಟಿವಿ ವಿಡಿಯೋವೊಂದು ಹೊರ ಬಿದ್ದಿದೆ.
ಮಂಗಳವಾರ ರಾತ್ರಿ ಪೊಲೀಸರ ತಂಡವು ಸೂರತ್ ಬಳಿ ಮೂವರು ಪ್ರಯಾಣಿಕರಿದ್ದ ಕಾರನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ 75 ಲಕ್ಷ ರೂ. ನಗದು ಪತ್ತೆಯಾಗಿದೆ. ಈ ಕಾರಿನಲ್ಲಿದ್ದ ಉದಯ್ ಗುರ್ಜರ್ ಮತ್ತು ಮೊಹಮ್ಮದ್ ಫೈಜ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಮೂರನೇ ಆರೋಪಿ ಸಂದೀಪ್ ಎಂಬುವರರು ಪರಾರಿಯಾಗಿದ್ದಾರೆ.
ಈ ಕಾರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸೂರತ್ ರ‍್ಯಾಲಿಗೆ ಸಂಬಂಧಿಸಿದ ಕರಪತ್ರಗಳು ಮತ್ತು ಬಿಎಂ ಹೆಸರಿನ ವಿಐಪಿ ಕಾರು ಪಾಸ್ ಸಹ ಪತ್ತೆ ಮಾಡಿದೆ. ಅಲ್ಲದೇ, ಪರಾರಿಯಾಗಿರುವ ಮೂರನೇ ಆರೋಪಿ ಸಂದೀಪ್ ಅವರನ್ನು ಎಐಸಿಸಿ ಕಾರ್ಯದರ್ಶಿ ಮತ್ತು ದಕ್ಷಿಣ ಗುಜರಾತ್ನ ಕಾಂಗ್ರೆಸ್ ಉಸ್ತುವಾರಿ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಸಂದೀಪ್ ಓಡಿ ಹೋಗುತ್ತಿರುವ ಸಿಸಿಟಿವಿ ದೃಶ್ಯಗಳು ಬೆಳಕಿಗೆ ಬಂದಿದೆ. ಜೊತೆಗೆ ಬಂಧಿತ ಆರೋಪಿ ಉದಯ್ ಗುರ್ಜರ್ ಸಹ ರಾಜಸ್ಥಾನ ಯುವ ಕಾಂಗ್ರೆಸ್ನೊಂದಿಗೆ ನಂಟು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ಟೀಕಾ ಪ್ರಹಾರ ನಡೆಸಿದೆ.
ಕಾರಿನಲ್ಲಿ ಕಾಂಗ್ರೆಸ್ ಕರಪತ್ರಗಳು ಪತ್ತೆಯಾಗಿರುವುದರಿಂದ ಹಿರಿಯ ನಾಯಕರು ಶಾಮೀಲು ಆಗಿರುವುದು ಸೂಚಿಸುತ್ತದೆ. ಜೊತೆಗೆ ನಗದು ಕೂಡ ಕಾಂಗ್ರೆಸ್‌ಗೆ ಸೇರಿರುವ ಎಲ್ಲ ಸಾಧ್ಯತೆಗಳಿವೆ. ಸೂರತ್‌ನಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಸಾಗಿಸಲು ಕಾರಣವೇನು ಎಂಬ ತನಿಖೆ ನಡೆಸಬೇಕೆಂದು ಬಿಜೆಪಿ ಮಾಧ್ಯಮ ಸಂಯೋಜಕ ಯಜ್ಞೇಶ್ ದವೆ ಒತ್ತಾಯಿಸಿದ್ದಾರೆ.
ಬಿಜೆಪಿ ಆರೋಪಗಳನ್ನು ತಳ್ಳಿಹಾಕಿರುವ ಸೂರತ್ ಕಾಂಗ್ರೆಸ್ ನಾಯಕರಾದ ನೈಸಾದ್ ದೇಸಾಯಿ ಮತ್ತು ಹೇಮಂಗ್ ರಾವಲ್, ಈ ನಗದು ಕಾಂಗ್ರೆಸ್‌ಗೆ ಸೇರಿದ್ದು ಎಂಬುದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ. ಬೇಕಾದರೆ ತನಿಖೆ ನಡೆಸಲಿ ಆಗ ಸತ್ಯ ಬಹಿರಂಗವಾಗಲಿದೆ. ತಮ್ಮ ಪಕ್ಷವು ದೇಶದ ಕಾನೂನಿನ ಮೇಲೆ ಸಂಪೂರ್ಣ ನಂಬಿಕೆ ಹೊಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋರ್ಬಿ ದುರಂತ: ಗುಜರಾತ್ನ ಎಲ್ಲ ಸೇತುವೆಗಳ ಸಮೀಕ್ಷೆಗೆ ಹೈಕೋರ್ಟ್ ಆದೇಶ