ನವದೆಹಲಿ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಆದೇಶಗಳನ್ನು ಪಾಲಿಸದ ಮತ್ತು ಯಮುನಾ ನದಿಗೆ ಕಲುಷಿತ ಕೊಳಚೆ ನೀರನ್ನು ಬಿಟ್ಟಿದ್ದಕ್ಕಾಗಿ ದೆಹಲಿ ಜಲ ಮಂಡಳಿ ಮತ್ತು ನೋಯ್ಡಾ ಪ್ರಾಧಿಕಾರಕ್ಕೆ 150 ಕೋಟಿ ರೂಪಾಯಿ ದಂಡ ವಿಧಿಸಿದೆ. ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ಪೀಠ ಈ ಆದೇಶ ನೀಡಿದೆ.
ನಿಗದಿತ ಮಾನದಂಡಗಳ ಪ್ರಕಾರ ಒಳಚರಂಡಿ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸದಿದ್ದಕ್ಕಾಗಿ ಮತ್ತು ಕೊಂಡ್ಲಿ/ನೋಯ್ಡಾ ಡ್ರೈನ್ ಮೂಲಕ ಯಮುನಾ ನದಿಗೆ ಕಲುಷಿತ ನೀರನ್ನು ಬಿಡುವುದಕ್ಕೆ NGT ದಂಡ ವಿಧಿಸಿದೆ.
ನೋಯ್ಡಾ ಪ್ರಾಧಿಕಾರಕ್ಕೆ 100 ಕೋಟಿ ಮತ್ತು ದೆಹಲಿ ಜಲ ಮಂಡಳಿಗೆ 50 ಕೋಟಿ ಎನ್‌ಜಿಟಿ ದಂಡ ವಿಧಿಸಿದೆ. ದಂಡದ ಮೊತ್ತವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಖಾತೆಗೆ ಜಮಾ ಮಾಡಲು ಎನ್‌ಜಿಟಿ ಆದೇಶಿಸಿದೆ. ಪರಿಸರ ಮತ್ತು ಜನರ ಆರೋಗ್ಯಕ್ಕೆ ಉಂಟಾದ ಹಾನಿಯನ್ನು ಸರಿದೂಗಿಸಲು ಈ ಮೊತ್ತವನ್ನು ಬಳಸಲಾಗುತ್ತದೆ.
ನೋಯ್ಡಾದಲ್ಲಿನ ಕಟ್ಟಡಗಳು ಸಾಕಷ್ಟು ಸಂಖ್ಯೆಯ ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಹೊಂದಿಲ್ಲ ಅಥವಾ ಅವು ನಿಗದಿತ ಮಾನದಂಡಗಳ ಪ್ರಕಾರ ಕಾರ್ಯನಿರ್ವಹಿಸುತ್ತಿಲ್ಲ ಎಂದು ಎನ್‌ಜಿಟಿ ಹೇಳಿದೆ. ದೆಹಲಿ ಜಲ ಮಂಡಳಿಯ ಕೊಳಚೆ ನೀರು ಸಂಸ್ಕರಣಾ ಘಟಕಗಳು ನಿಗದಿತ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುತ್ತಿಲ್ಲ.
ಇದರಿಂದಾಗಿ ನೋಯ್ಡಾ ಮತ್ತು ಶಹದಾರ ಚರಂಡಿ ಮೂಲಕ ಯಮುನಾ ನದಿ ಮಾತ್ರವಲ್ಲದೇ ಗಂಗಾ ನದಿಯೂ ಕಲುಷಿತಗೊಳ್ಳುತ್ತಿದೆ. ದೆಹಲಿ ಮತ್ತು ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅದಕ್ಕೆ ಕಾರಣರಾದ ಅಧಿಕಾರಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಎನ್‌ಜಿಟಿ ಆದೇಶಿಸಿದೆ.
ಓದಿ: ಪೋಲವರಂ ಅಣೆಕಟ್ಟಿನಲ್ಲಿ ತ್ಯಾಜ್ಯ ಡಂಪಿಂಗ್ ನಿಯಂತ್ರಿಸಲು ಸಮಿತಿ ರಚನೆ