ಚೆನ್ನೈ( ತಮಿಳುನಾಡು): ಇಥಿಯೋಪಿಯಾದಿಂದ ಚೆನ್ನೈಗೆ ವಿಮಾನದ ಮೂಲಕ ಭಾರಿ ಪ್ರಮಾಣದಲ್ಲಿ ಮಾದಕ ದ್ರವ್ಯ ಸಾಗಣೆಯಾಗುತ್ತಿರುವ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ. ನಂತರ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಕಣ್ಗಾವಲು ತೀವ್ರಗೊಳಿಸಿದ್ದಾರೆ.
ಇಥಿಯೋಪಿಯಾದ ಅಡಿಸ್ ಅಬಾಬಾದಿಂದ ಶುಕ್ರವಾರ (ಆಗಸ್ಟ್ 12) ಚೆನ್ನೈಗೆ ಆಗಮಿಸಿದ ಎಲ್ಲ ಇಥಿಯೋಪಿಯನ್ ಏರ್‌ಲೈನ್ಸ್ ಪ್ರಯಾಣಿಕರನ್ನು ಪರಿಶೀಲಿಸಲಾಯಿತು. ಈ ವೇಳೆ, ಆಫ್ರಿಕನ್ ದೇಶಗಳ ಪ್ರಯಾಣಿಕರನ್ನು ವಿಶೇಷವಾಗಿ ಸೂಕ್ಷ್ಮವಾಗಿ ಗಮನಿಸಲಾಯಿತು. ಆದರೆ, ಅವರಿಂದ ಯಾವುದೇ ಡ್ರಗ್ಸ್ ಪತ್ತೆಯಾಗಲಿಲ್ಲ.
ಆಫ್ರಿಕಾದಿಂದ ಚೆನ್ನೈಗೆ ಬಂದಿದ್ದ ಇಕ್ಬಾಲ್ ಪಾಷಾ (38) ಎಂಬ ಭಾರತೀಯ ಪ್ರಯಾಣಿಕನ ಮೇಲೆ ಅಧಿಕಾರಿಗಳು ಅನುಮಾನಗೊಂಡು ಆತನನ್ನು ತಡೆದು ವಿಚಾರಣೆ ನಡೆಸಿದರು. ಆಗ ಆತ ಕಸ್ಟಮ್ ಅಧಿಕಾರಿಗಳಿಗೆ ಸರಿಯಾದ ಉತ್ತರ ನೀಡಲಿಲ್ಲ. ಬಳಿಕ ಪ್ರತ್ಯೇಕ ಕೊಠಡಿಗೆ ಕರೆದೊಯ್ದು ಕೂಲಂಕಷವಾಗಿ ತಪಾಸಣೆ ನಡೆಸಲಾಯಿತು.
ಆತನ ಬಟ್ಟೆ, ಒಳ ಉಡುಪು, ಶೂ ಸೇರಿದಂತೆ ವಿವಿಧೆಡೆ ಒಟ್ಟು 9 ಕೆಜಿ 590 ಗ್ರಾಂ ಕೊಕೇನ್ ಮತ್ತು ಹೆರಾಯಿನ್ ಇರುವುದು ಕಂಡು ಬಂತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 100 ಕೋಟಿ ಹೆಚ್ಚಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ಬಂಧಿಸಿ ಡ್ರಗ್ಸ್ನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
1932ರಲ್ಲಿ ಚೆನ್ನೈ ವಿಮಾನ ನಿಲ್ದಾಣ ಸ್ಥಾಪನೆಯಾದ ನಂತರ ಒಬ್ಬ ಪ್ರಯಾಣಿಕನಿಂದ 100 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿರುವುದು ಇದೇ ಮೊದಲು. 100 ಕೋಟಿ ಮೌಲ್ಯದ ಈ ಮಾದಕ ವಸ್ತುವನ್ನು ಭಾರತಕ್ಕೆ ತಂದು ಎಲ್ಲೆಂದರಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ. ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಗಂಭೀರ ತನಿಖೆ ನಡೆಯುತ್ತಿದೆ.
ಓದಿ: ಡಂಜೊ, ಪೋರ್ಟರ್ ಮೂಲಕ ಮನೆಬಾಗಿಲಿಗೆ ಡ್ರಗ್ಸ್: ಐವರ ಬಂಧನ, ₹2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ