ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನಾರಚನೆಯ ನಂತರ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಶುಭಸುದ್ದಿ ನೀಡಿದ್ದಾರೆ. ಎಪಿಎಂಸಿಗಳನ್ನು ಮತ್ತಷ್ಟು ಬಲಪಡಿಸಲು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದಕ್ಕಾಗಿ 1 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಯಾವುದೇ ಕಾರಣಕ್ಕೂ ಎಪಿಎಂಸಿಗಳನ್ನು ಮುಚ್ಚುವುದಿಲ್ಲ. ಕೃಷಿ ಕಾಯ್ದೆಗಳನ್ನು ಜಾರಿಗೆ ತಂದ ನಂತರ ಎಪಿಎಂಸಿಗಳು ಮೂಲಸೌಕರ್ಯ ನಿಧಿಯಿಂದ ಕೋಟ್ಯಂತರ ರೂಪಾಯಿ ಪಡೆಯಲಿದ್ದು, ಇದು ಹೆಚ್ಚಿನ ರೈತರಿಗೆ ಉಪಯೋಗವಾಗಲಿದೆ ಎಂದರು.
ಎಪಿಎಂಸಿಗಳನ್ನು ಬಲಪಡಿಸಲಾಗುವುದು ಎಂದು ಈ ಹಿಂದೆಯೇ ಹೇಳಲಾಗಿತ್ತು. ಎಪಿಎಂಸಿಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು. ರೈತರ ಮೂಲಸೌಕರ್ಯ ನಿಧಿಗೆ ಆತ್ಮನಿರ್ಭರ ಭಾರತ್ ಅಡಿಯಲ್ಲಿ ನಿಗದಿಪಡಿಸಿರುವ 1 ಲಕ್ಷ ಕೋಟಿ ರೂ.ಗಳನ್ನು ಎಪಿಎಂಸಿಗಳು ಬಳಸಬಹುದು ಎಂದು ಸ್ಪಷ್ಟಪಡಿಸಿದರು.
ತೆಂಗಿನ ಕೃಷಿಯನ್ನು ಹೆಚ್ಚಿಸಲು ತೆಂಗಿನಕಾಯಿ ಮಂಡಳಿ ಕಾಯ್ದೆಗೆ ತಿದ್ದುಪಡಿ ಮಾಡುತ್ತಿದ್ದೇವೆ. ಮಂಡಳಿಯ ಅಧ್ಯಕ್ಷರು ಅಧಿಕಾರೇತರ ವ್ಯಕ್ತಿಯಾಗಲಿದ್ದಾರೆ. ಅವರು ರೈತ ಸಮುದಾಯದಿಂದ ಬಂದವರೇ ಆಗಿರುತ್ತಾರೆ. ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರು ಆಗಿದ್ದರೆ ತೆಂಗಿನ ಕೃಷಿ ಬಗ್ಗೆ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.