ಪತ್ತನಂತಿಟ್ಟ(ಕೇರಳ): ಬೈಕ್ ಅಪಘಾತದಲ್ಲಿ ಗಾಯಗೊಂಡ 30 ವರ್ಷದ ವ್ಯಕ್ತಿಗೆ 1.58 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಪತ್ತನಂತಿಟ್ಟದ ಮೋಟಾರ್ ಆಕ್ಸಿಡೆಂಟ್ಸ್ ಕ್ಲೈಮ್ಸ್ ಟ್ರಿಬ್ಯೂನಲ್(MACT) ಆದೇಶಿಸಿದೆ. ಈ ಪರಿಹಾರ ಮೊತ್ತವು ಕೇರಳ ರಾಜ್ಯದಲ್ಲಿ ಬೈಕ್ ಅಪಘಾತಕ್ಕೆ ನೀಡಲಾದ ಅತ್ಯಧಿಕ ಮೊತ್ತವಾಗಿದೆ ಎಂದು ವರದಿಯಾಗಿದೆ. ಪತ್ತನಂತಿಟ್ಟ ಜಿಲ್ಲೆಯ ಪ್ರಕ್ಕನಂ ಮೂಲದ ಕುಟ್ಟಿಪ್ಲಕಲ್ ಹೌಸ್‌ನ ಅಖಿಲ್ ಕೆ ಬಾಬಿ ಈ ಪರಿಹಾರವನ್ನು ಪಡೆದ ಫಲಾನುಭವಿ
ಕಳೆದ ಆರು ವರ್ಷಗಳ ಹಿಂದೆ ಅಂದರೆ ಜುಲೈ 25, 2017 ರಂದು ಎಳಂತೂರು ಗಣಪತಿ ದೇವಸ್ಥಾನದ ಬಳಿ ಅಪಘಾತ ಸಂಭವಿಸಿತ್ತು. 24 ವರ್ಷದ(ಅಂದು) ಅಖಿಲ್ ತನ್ನ ಬೈಕ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಇನ್ನೊಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದ. ತೀವ್ರವಾಗಿ ಗಾಯಗೊಂಡಿರುವ ಅಖಿಲ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯದ ಸ್ವರೂಪ ಮಾರಣಾಂತಿಕವಾಗಿದ್ದರಿಂದ ಅಖಿಲ್ ಅವರನ್ನು ವೆಲ್ಲೂರು ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿತ್ತು.
ಆದರೆ ಈ ಘಟನೆ ಅವರ ಬದುಕನ್ನೇ ತಲೆಕೆಳಗಾಗಿಸಿತು. ಸದ್ಯ ಅವರು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ವೈದ್ಯಕೀಯ ಮಂಡಳಿ ಎಂಎಸಿಟಿ ನ್ಯಾಯಾಲಯದಲ್ಲಿ ನಿರ್ಣಾಯಕ ವೈದ್ಯಕೀಯ ಪರೀಕ್ಷೆಯ ವರದಿಯನ್ನು ಸಲ್ಲಿಸಿದೆ. ಅಖಿಲ್ ಅಪಘಾತದಿಂದ 90 ಪ್ರತಿಶತ ಅಂಗವೈಕಲ್ಯವನ್ನು ಅನುಭವಿಸಿದ್ದಾರೆ. ಅವರ ಬೆನ್ನುಮೂಳೆ ಮತ್ತು ದೇಹದ ಇತರ ಭಾಗಗಳನ್ನು ಹಾನಿಗೊಳಿಸಿದೆ ಎಂದು ಹೇಳಿದೆ. ದುರಂತ ಅಪಘಾತ ನಡೆದು 6 ಪೂರೈಸುವ 3 ದಿನಗಳ ಮೊದಲು ಎಂಎಸಿಟಿ ನ್ಯಾಯಾಲಯದ ತೀರ್ಪು ಅಖಿಲ್ ಅವರ ದುಃಖಕ್ಕೆ ಸಾಂತ್ವನ ನೀಡಿದೆ.
ಇದನ್ನೂ ಓದಿ: ವೈಯಕ್ತಿಕ ಅಪಘಾತ ವಿಮೆ.. ಅಪಘಾತವಾದರೆ ಇದೇ ಆಪದ್ಬಾಂಧವ
1.58 ಕೋಟಿ ಪರಿಹಾರ: ಪತ್ತನಂತಿಟ್ಟದ ಮೋಟಾರು ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್ನ ನ್ಯಾಯಾಧೀಶರಾದ ಜಿ.ಪಿ ಜಯಕೃಷ್ಣನ್ ಅವರು ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ ವಿಮಾ ಕಂಪನಿ ರೂ 1,58,76,192 ರ ಸಂಚಿತ ಮೊತ್ತವನ್ನು ಪಾವತಿಸಬೇಕು. ಇದರಲ್ಲಿ ರೂ 6,17,333 ಕಾನೂನು ವೆಚ್ಚಗಳು ಮತ್ತು ರೂ 1,02,49,44 ರ ಮೂಲ ಪರಿಹಾರದ ಮೇಲೆ 9% ರಷ್ಟು ಬಡ್ಡಿಯನ್ನು ಒಳಗೊಂಡಿದೆ..ಮೊಕದ್ದಮೆ ದಾಖಲಿಸಿದ ದಿನಾಂಕವಾದ ಮಾರ್ಚ್ 15 2018 ರಿಂದ ಬಡ್ಡಿಯನ್ನು ಲೆಕ್ಕಹಾಕಲಾಗಿದೆ. ಪ್ರತಿವಾದಿಗಳು, ಪತ್ತನಂತಿಟ್ಟದಲ್ಲಿರುವ ನ್ಯಾಷನಲ್ ಇನ್ಶುರೆನ್ಸ್ ಕಂಪನಿಯ ಶಾಖಾ ಕಚೇರಿ, ಅರ್ಜಿದಾರರಿಗೆ ಒಂದು ತಿಂಗಳೊಳಗೆ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ: ಅಪಘಾತದಲ್ಲಿ ಮಡಿದ KSRTC ಸಿಬ್ಬಂದಿಗೆ ₹1 ಕೋಟಿ ಅಪಘಾತ ವಿಮೆ; ಇಬ್ಬರು ಸಿಬ್ಬಂದಿಯ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ