ಭೋಜ್ಪುರ (ಬಿಹಾರ): ಭೋಜ್ಪುರದ ನಾವಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ನಲ್ಲಿ ಹಗಲು ಹೊತ್ತಲ್ಲೇ 16 ಲಕ್ಷ ರೂಪಾಯಿ ದರೋಡೆ ನಡೆದಿದೆ. ವಿಪರ್ಯಾಸವೆಂದರೆ ಹೊರಗೆ ಸುತ್ತುವರಿದಿದ್ದ ಪೊಲೀಸರು ನಿರಂತರವಾಗಿ ಬ್ಯಾಂಕ್ ಒಳಗಿದ್ದ ದುಷ್ಕರ್ಮಿಗಳಿಗೆ ಶರಣಾಗುವಂತೆ ಮನವಿ ಮಾಡುತ್ತಿದ್ದರೂ, ದೋಚಿದ ಹಣದೊಂದಿಗೆ ದುಷ್ಕರ್ಮಿಗಳು ಸುಲಭವಾಗಿ ಪರಾರಿಯಾಗಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ದರೋಡೆ ಮಾಡುವ ಉದ್ದೇಶದಿಂದ ಭೋಜ್ಪುರದ ನಾವಡ ಪೊಲೀಸ್ ಠಾಣಾ ವ್ಯಾಪ್ತಿಯ ಕಟೀರದಲ್ಲಿರುವ ಆಕ್ಸಿಸ್ ಬ್ಯಾಂಕ್ ಬಾಗಿಲು ತೆರೆದ ಕೂಡಲೇ ಐದು ಮಂದಿ ಶಸ್ತ್ರಸಜ್ಜಿತ ದರೋಡೆಕೋರರು ಬ್ಯಾಂಕ್ ಒಳಗೆ ನುಗ್ಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳಕ್ಕಾಗಮಿಸಿರುವ ಪೊಲೀಸರು, ಎಲ್ಲ ಕಡೆಯಿಂದಲೂ ಬ್ಯಾಂಕ್ ಸುತ್ತುವರಿದಿದ್ದು, ದುಷ್ಕರ್ಮಿಗಳ ಮನವೊಲಿಸಲು ಪ್ರಯತ್ನಿಸುತ್ತಿದ್ದರು.
ಸ್ಥಳದಲ್ಲಿ ನಾವಡ ಪೊಲೀಸ್ ಠಾಣೆಯ ಎಎಸ್ಪಿ ಜೊತೆಗೆ ಇತರ ಪೊಲೀಸ್ ಸಿಬ್ಬಂದಿ ಸೇರಿದಂತೆ ಡಿಐಯು ತಂಡ ಶಸ್ತ್ರಾಸ್ತ್ರಗಳೊಂದಿಗೆ ಬ್ಯಾಂಕ್ನ ಸುತ್ತಲೂ ಸನ್ನದ್ಧವಾಗಿತ್ತು. ದರೋಡೆಕೋರರಿಗೆ ಶರಣಾಗುವಂತೆ ಪೊಲೀಸರು ನಿರಂತರವಾಗಿ ಮನವಿ ಮಾಡುತ್ತಿದ್ದರೂ, ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ಒಳಗಿದ್ದ 16 ಲಕ್ಷ ರೂಪಾಯಿ ಹಣವನ್ನು ದೋಚಿ, ದರೋಡೆಕೋರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಭೋಜ್ಪುರ ಎಸ್ಪಿ ಪ್ರಮೋದ್ ಕುಮಾರ್, "ಬೆಳಗ್ಗೆ ಬ್ಯಾಂಕ್ ಬಾಗಿಲು ತೆರೆದ ಕೂಡಲೇ ಐದು ಜನ ಶಸ್ತ್ರಸಜ್ಜಿತ ದರೋಡೆಕೋರರು ಬ್ಯಾಂಕ್ಗೆ ನುಗ್ಗಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ಬಂದಿದ್ದು, ನಮ್ಮ ತಂಡ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದೆ. ಆದರೆ ಅಷ್ಟರಲ್ಲಿ ದರೋಡೆಕೋರರು 16 ಲಕ್ಷ ರೂಪಾಯಿ ಲೂಟಿ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬ್ಯಾಂಕ್ ಒಳಗಿದ್ದ ದುಷ್ಕರ್ಮಿಗಳು ಗೇಟ್ಗೆ ಬೀಗ ಹಾಕಿದ್ದರು. ಇದರಿಂದಾಗಿ ಪೊಲೀಸ್ ತಂಡ ದುಷ್ಕರ್ಮಿಗಳು ಒಳಗಡೆ ಇದ್ದಾರೆ ಎನ್ನುವ ಗೊಂದಲದಲ್ಲಿತ್ತು. ಆ ಗೊಂದಲದಲ್ಲಿ ನಾವು ಹೊರಗಿನಿಂದ ಸುತ್ತುವರಿದು, ದುಷ್ಕರ್ಮಿಗಳನ್ನು ಶರಣಾಗುವಂತೆ ಹೇಳುತ್ತಿದ್ದೆವು. ಯಾವುದೇ ಪ್ರತಿಕ್ರಿಯೆ ಇಲ್ಲದೇ ಇರುವುದನ್ನು ಗಮನಿಸಿ, ಬೀಗ ಒಡೆದು ನೋಡಿದಾಗ ಆಗಲೇ ದುಷ್ಕರ್ಮಿಗಳು ಹಣದ ಜೊತೆ ಪರಾರಿಯಾಗಿರುವುದು ಕಂಡು ಬಂದಿದೆ. ಎಲ್ಲಾ ದರೋಡೆಕೋರರ ಚಿತ್ರಗಳ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ನಗರದಾದ್ಯಂತ ಪೊಲೀಸರು ನಾಕಾಬಂದಿ ಹಾಕಿದ್ದು, ಶೀಘ್ರವೇ ದರೋಡೆಕೋರರನ್ನು ಬಂಧಿಸಿ, ಹಣ ವಶಕ್ಕೆ ಪಡೆಯಲಾಗುವುದು" ಎಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ, ಎಎಸ್ಪಿ ಹಾಗೂ ಹಲವು ಠಾಣೆಗಳ ಪೊಲೀಸರು ಆಗಮಿಸಿದ್ದರು. ಸ್ವತಃ ಎಸ್ಪಿ ಅವರೇ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಶಸ್ತ್ರಾಸ್ತ್ರಗಳೊಂದಿಗೆ ಕಾರ್ಯಾಚರಣೆಗೆ ಸಿದ್ಧರಾಗಿದ್ದರು. ದರೋಡೆಕೋರರು ಸಿಬ್ಬಂದಿಯ ಮೊಬೈಲ್ ಕಿತ್ತುಕೊಂಡು, ಬ್ಯಾಂಕ್ ಒಳಗೆ ಕೂಡಿ ಹಾಕಿದ್ದರೂ, ಯಾವುದೇ ಗುಂಡಿನ ದಾಳಿ ನಡೆಸಿಲ್ಲ.
ಇದನ್ನೂ ಓದಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ದರೋಡೆ: ಬಂದೂಕು ತೋರಿಸಿ 19 ಕೋಟಿ ದೋಚಿ ಪರಾರಿಯಾದ ಖದೀಮರು