ಹೈದರಾಬಾದ್: ರಸಗೊಬ್ಬರ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡದಂತೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ. ಇದೇ ವೇಳೆ, ಹೆಚ್ಚುವರಿ ವೆಚ್ಚವನ್ನು ರೈತರಿಗೆ ಹೊರೆಯಾಗದಂತೆ ಕೇಂದ್ರ ಸರ್ಕಾರವೇ ಭರಿಸುವಂತೆ ಒತ್ತಾಯಿಸಿದ್ದಾರೆ.
ಕೆಸಿಆರ್ ಬರೆದ ಪತ್ರದ ವಿವರ:
ರಸಗೊಬ್ಬರ ಬೆಲೆ ಮತ್ತು ಇಂಧನ ಬೆಲೆಯಲ್ಲಿ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ರೈತರ ಆದಾಯಕ್ಕೆ ಪಟ್ಟು ನೀಡುತ್ತಿದ್ದು, ಅನ್ನದಾತರ ಕೃಷಿ ವೆಚ್ಚವನ್ನು ದ್ವಿಗುಣಗೊಳಿಸುತ್ತಿದೆ. ಕೋಟ್ಯಂತರ ರೈತರ ಪರವಾಗಿ ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡ್ತಿದ್ದು, ರಸಗೊಬ್ಬರ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡದಂತೆ ಆಗ್ರಹಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಘೋಷಣೆ ಸೇರಿದಂತೆ ರೈತರ ಬೆಳೆಗಳಿಗೆ ಬೆಲೆ ಖಾತರಿಪಡಿಸುವ ಯಾವುದೇ ಘೋಷಣೆ ಕೇಂದ್ರ ಸರ್ಕಾರ ಮಾಡಿಲ್ಲ ಎಂದಿರುವ ಕೆಸಿಆರ್, ಯೂರಿಯಾ, ಡಿಎಪಿ ಗೊಬ್ಬರ ಬಳಕೆ ಕಡಿಮೆ ಮಾಡುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ. ಆದರೆ, ಕಳೆದ ಆರು ವರ್ಷಗಳಲ್ಲಿ ರಸಗೊಬ್ಬರಗಳ ಬೆಲೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಮಾಡುತ್ತಿರುವುದು ಯಾಕೆ? ಎಂದು ಕೇಳಿದ್ದಾರೆ.
ಇದನ್ನೂ ಓದಿ: ₹40 ಕೋಟಿ ಮೌಲ್ಯದ ಪ್ರಾಚೀನ ವಿಗ್ರಹ ವಶಕ್ಕೆ ಪಡೆದ ತಮಿಳುನಾಡು ಪೊಲೀಸರು
ರಸಗೊಬ್ಬರದ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ರೈತ ಸಮುದಾಯದ ಬೆನ್ನು ಮುರಿಯುವ ಕೆಲಸ ಮಾಡ್ತಿದೆ ಎಂದು ಆರೋಪಿಸಿರುವ ಕೆಸಿಆರ್, ಈ ನಿರ್ಧಾರದ ಮೂಲಕ ಕೃಷಿ ಕ್ಷೇತ್ರವನ್ನು ಬಿಕ್ಕಟ್ಟಿಗೆ ಸಿಲುಕಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದ್ದಾರೆ.
2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ, ಗರಿಷ್ಠ ಮಟ್ಟದಲ್ಲಿ ರಸಗೊಬ್ಬರಗಳ ಬೆಲೆ ಏರಿಕೆ ಮಾಡುವ ಮೂಲಕ ರೈತ ವಿರೋಧಿ ಸರ್ಕಾರವಾಗಿ ಮಾರ್ಪಟ್ಟಿದೆ ಎಂದಿದ್ದಾರೆ. ಕೇಂದ್ರ ಸರ್ಕಾರದ ನೀತಿಗಳು ರೈತರ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಮೋಟಾರ್ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದು ಸಹ ರೈತರ ಆದಾಯಕ್ಕೆ ಕತ್ತರಿ ಹಾಕಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.