ನವದೆಹಲಿ: ಕ್ವೀರ್ ದಂಪತಿಗಳು ಅಥವಾ ಭಿನ್ನ ಲಿಂಗಿಗಳ (ಸಲಿಂಗಿ, ದ್ವಿಲಿಂಗಿ, ಟ್ರಾನ್ಸ್‌ಜೆಂಡರ್ ಸೇರಿದಂತೆ ಒಟ್ಟಾರೆ ಭಿನ್ನ ಸಾಮಾನ್ಯರನ್ನು ಕ್ವೀರ್ ಎಂದು ಕರೆಯಲಾಗುತ್ತದೆ) ವಿವಾಹ ಸಮಾನತೆಯ ಹಕ್ಕನ್ನು ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ.28ರಂದು ನಡೆಸಲಿದೆ. ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದೆ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದರು.
ಪರಿಶೀಲನಾ ಅರ್ಜಿಯ ಬಗ್ಗೆ ಮುಕ್ತ ನ್ಯಾಯಾಲಯದ ವಿಚಾರಣೆ ನಡೆಯಲಿ ಎಂದು ಮುಕುಲ್ ರೋಹಟಗಿ ಒತ್ತಾಯಿಸಿದರು. ಕ್ವೀರ್ ದಂಪತಿಗಳ ವಿಚಾರದಲ್ಲಿ ತಾರತಮ್ಯವಿದೆ ಎಂದು ಎಲ್ಲಾ ನ್ಯಾಯಾಧೀಶರು ಒಪ್ಪಿಕೊಂಡಿದ್ದಾರೆ ಎಂಬುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಿರ್ಧರಿಸಿದಂತೆ ನವೆಂಬರ್ 28 ರಂದು ನಡೆಸಬೇಕು ಮತ್ತು ಯಾವುದೇ ಕಾರಣಕ್ಕೂ ಅದನ್ನು ಲಿಸ್ಟ್ನಿಂದ ತೆಗೆದುಹಾಕಬಾರದು ಎಂದು ಮನವಿ ಮಾಡಿದರು.
ನ್ಯಾಯಾಲಯವು ಇನ್ನೂ ಅರ್ಜಿಗಳನ್ನು ಪರಿಶೀಲಿಸಿಲ್ಲ ಮತ್ತು ಪರಿಶೀಲಿಸಿದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿತು. ಕ್ವೀರ್ ದಂಪತಿಗಳಿಗೆ ವಿವಾಹ ಸಮಾನತೆಯ ಹಕ್ಕುಗಳನ್ನು ನಿರಾಕರಿಸಿದ ಉನ್ನತ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ವಿವಿಧ ಪರಿಶೀಲನಾ ಅರ್ಜಿಗಳನ್ನು ಸಲ್ಲಿಸಲಾಗಿದೆ.
ವಿಶೇಷ ವಿವಾಹ ಕಾಯ್ದೆ 1954 (ಎಸ್ಎಂಎ), ವಿದೇಶಿ ವಿವಾಹ ಕಾಯ್ದೆ, 1969 (ಎಫ್ಎಂಎ) ಅಡಿಯಲ್ಲಿ ಸಲಿಂಗ ಮತ್ತು ಕ್ವೀರ್ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿ ಸುಪ್ರೀಂ ಕೋರ್ಟ್ ಅಕ್ಟೋಬರ್ 17 ರಂದು ನೀಡಿದ ಬಹುಮತದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ವಕೀಲರಾದ ಕರುಣಾ ನಂದಿ ಮತ್ತು ರುಚಿರಾ ಗೋಯೆಲ್ ಕೂಡ ಒಂದು ಮನವಿ ಸಲ್ಲಿಸಿದ್ದಾರೆ.
ಅಕ್ಟೋಬರ್ 17 ರಂದು ಸುಪ್ರೀಂ ಕೋರ್ಟ್ ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ನೀಡಿತ್ತು. ನ್ಯಾಯಮೂರ್ತಿಗಳಾದ ಎಸ್.ಆರ್. ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್.ನರಸಿಂಹ ಅವರು ಬಹುಮತದ ತೀರ್ಪು ನೀಡಿದ್ದರು. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರು ಅಲ್ಪಮತದ ತೀರ್ಪು ನೀಡಿದ್ದರು. ಉನ್ನತ ನ್ಯಾಯಾಲಯದ ಹಿಂದಿನ ಆದೇಶವನ್ನು ರದ್ದುಗೊಳಿಸುವುದರ ಜೊತೆಗೆ, ವಿಶೇಷ ವಿವಾಹ ಕಾಯ್ದೆ, 1954 ರ ಸೆಕ್ಷನ್ 15-18 ರ ಅಡಿಯಲ್ಲಿ ಪರಿಹಾರಗಳನ್ನು ಪರಿಗಣಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ : ಡೀಪ್ ಫೇಕ್ ತಡೆಗೆ ಶೀಘ್ರ ಹೊಸ ಕಾನೂನು: ಕೇಂದ್ರ ಸರ್ಕಾರ