ಮಥುರಾ: 3 ಕೋಟಿ ರೂಪಾಯಿ ಪಾವತಿಸುವಂತೆ ಆಟೋ ಚಾಲಕರೊಬ್ಬರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿರುವ ಘಟನೆ ನಡೆದಿದೆ.
ಮಥುರಾದ ಬಕಲ್‌ಪುರ ಪ್ರದೇಶದ ಅಮರ್ ಕಾಲೋನಿ ನಿವಾಸಿ ಪ್ರತಾಪ್ ಸಿಂಗ್ ಅವರಿಗೆ ಐಟಿ ಇಲಾಖೆಯಿಂದ ನೋಟಿಸ್ ಬಂದಿದ್ದು, ಈ ಕುರಿತು ಅವರು ಹೈವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ಟೋಬರ್ 19 ರಂದು ನನಗೆ ಐಟಿ ಅಧಿಕಾರಿಗಳಿಂದ ಕರೆ ಬಂದಿತ್ತು. 3,47,54,896 ರೂ. ಪಾವತಿಸುವಂತೆ ನೋಟಿಸ್ ನೀಡಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸ್ಟೇಷನ್ ಹೌಸ್ ಆಫೀಸ್ (SHO) ಅನುಜ್ ಕುಮಾರ್ ಸಿಂಗ್, ಪ್ರತಾಪ್ ಸಿಂಗ್ ದೂರಿನ ಆಧಾರದ ಮೇಲೆ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ಆದರೆ, ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಪ್ರತಾಪ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಕ್ಲಿಪ್ವೊಂದನ್ನು ಅಪ್ಲೋಡ್ ಮಾಡಿದ್ದು, ಅದರಲ್ಲಿ ಘಟನೆ ಕುರಿತು ವಿವರಿಸಿದ್ದಾರೆ. ಮಾರ್ಚ್ 15 ರಂದು ತೇಜ್ ಪ್ರಕಾಶ್ ಉಪಾಧ್ಯಾಯ ಒಡೆತನದ ಬಕಲ್‌ಪುರದ ಜನ್ ಸುವಿಧಾ ಕೇಂದ್ರದಲ್ಲಿ ಪಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದೆ. ನಂತರ ಬಕಲ್‌ಪುರದ ಸಂಜಯ್ ಸಿಂಗ್ ಅವರಿಂದ PAN ಕಾರ್ಡ್ ಫೋಟೋಕಾಪಿಯನ್ನು ಪಡೆದುಕೊಂಡೆ. ಈ ವೇಳೆ ಯಾರೋ ನನ್ನನ್ನು ಯಾಮಾರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಪ್ರತಾಪ್ ಸಿಂಗ್ ಹೆಸರಿನಲ್ಲಿ ಜಿಎಸ್‌ಟಿ ಸಂಖ್ಯೆಯನ್ನು ಪಡೆದು 2018-19ರಲ್ಲಿ 43,44,36,201 ರೂ. ವಹಿವಾಟು ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಐಟಿ ಅಧಿಕಾರಿಗಳಿಂದ ನನಗೆ ಸೂಚಿಸಲಾಗಿದೆ ಎಂದು ಅನುಜ್ ಕುಮಾರ್ ಸಿಂಗ್ ಹೇಳಿದ್ದಾರೆ.