ಚೆನ್ನೈ(ತಮಿಳುನಾಡು): ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯನ್ನು ಪುನಶ್ಚೇತನಗೊಳಿಸುವಂತೆ ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆ ಮನವಿ ಮಾಡಿದೆ. ರಾಷ್ಟ್ರದ ಆರ್ಥಿಕ ಏಳಿಗೆಗಾಗಿ ಈ ಯೋಜನೆಯನ್ನು ಪುನಶ್ಚೇತನಗೊಳಿಸಲು ಮತ್ತು ಭಾರತೀಯ ಬಂದರುಗಳ ಸರಕು ನಿರ್ವಹಣೆ ಸಾಮರ್ಥ್ಯವನ್ನು ಹೆಚ್ಚಿಸಲು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕರೆ ನೀಡಿದ್ದಾರೆ. ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ಡಿಎಂಕೆ ನಾಯಕ ಟಿ ಆರ್ ಬಾಲು ಅವರ ಆತ್ಮಚರಿತ್ರೆ 'ಪಥೈಮಾರ ಪಯನಂ' ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
2005ರ ಜುಲೈ 2ರಂದು 2,500 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಆರಂಭಿಸಲಾದ ಈ ಯೋಜನೆಯಡಿ ಪರಂಪರೆಯ ಪ್ರತೀಕವಾದ ರಾಮಸೇತುವನ್ನು ಧ್ವಂಸಗೊಳಿಸುವುದನ್ನು ವಿರೋಧಿಸಿ ಪರಿಸರವಾದಿಗಳು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದ ಕಾರಣ ಯೋಜನೆ ಸ್ಥಗಿತಗೊಂಡಿತ್ತು. ರಾಮೇಶ್ವರಂನಲ್ಲಿ ರಾಮಸೇತು ನೈಜ ರೂಪದಲ್ಲಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸುತ್ತಿರುವುದು ಇಲ್ಲಿ ಗಮನಾರ್ಹ.
ದಕ್ಷಿಣ ತಮಿಳುನಾಡಿಗೆ ಆರ್ಥಿಕ ಪ್ರಯೋಜನಗಳನ್ನು ತರುವ ನಿಟ್ಟಿನಲ್ಲಿ ತಾನು ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ಪೂರ್ಣಗೊಳಿಸುವುದಾಗಿ 2021 ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಡಿಎಂಕೆ ಭರವಸೆ ನೀಡಿತ್ತು. ಕೇಂದ್ರದ ಬಿಜೆಪಿ ಸರ್ಕಾರ ಧಾರ್ಮಿಕ ನೆಪದಲ್ಲಿ ಯೋಜನೆಯನ್ನು ಕೈಬಿಟ್ಟಿದೆ ಎಂದು ಆರೋಪಿಸಿದ ಮುಖ್ಯಮಂತ್ರಿ, ಯುಪಿಎ ಆಡಳಿತಾವಧಿಯಲ್ಲಿ ಪ್ರಾರಂಭಿಸಲಾದ ಯೋಜನೆಗೆ ಅನುಮತಿ ನೀಡಿದ್ದರೆ ಮಹತ್ತರವಾದ ಅಭಿವೃದ್ಧಿಯಾಗುತ್ತಿತ್ತು ಎಂದು ಹೇಳಿದರು.
ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯನ್ನು ನಿಲ್ಲಿಸಿದವರು ಯಾರು ಎಂಬುದು ನಿಮಗೆ ತಿಳಿದಿದೆ. ಹಾಗೆ ಮಾಡಿದ್ದು ಬಿಜೆಪಿ. ರಾಮೇಶ್ವರಂನಲ್ಲಿ ರಾಮಸೇತು ಅಸ್ತಿತ್ವದಲ್ಲಿದೆ ಎಂದು ಖಚಿತವಾಗಿ ಹೇಳಲಾಗದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಈ ಯೋಜನೆಗೆ ಚಾಲನೆ ನೀಡಿದಾಗ ಆಗ ಕೇಂದ್ರ ಸರ್ಕಾರದ ಹಿಂದಿನ ಪ್ರಮುಖ ಶಕ್ತಿ ಬಾಲು ಅವರೇ ಆಗಿದ್ದರು. ಈ ಯೋಜನೆಯನ್ನು ಸ್ಥಗಿತಗೊಳಿಸದಿದ್ದರೆ ತಮಿಳುನಾಡಿಗೆ ಸಾಕಷ್ಟು ಲಾಭವಾಗುತ್ತಿತ್ತು ಎಂದು ಸ್ಟಾಲಿನ್ ಅಭಿಪ್ರಾಯಪಟ್ಟರು.
ಈ ಯೋಜನೆ ತಮಿಳುನಾಡು ಮಾತ್ರವಲ್ಲದೆ ಇಡೀ ದೇಶಕ್ಕೆ ಹೆಮ್ಮೆಯಾಗುತ್ತಿತ್ತು. ದೇಶದ ವಿದೇಶಿ ವಿನಿಮಯ ಮೀಸಲು ಹೆಚ್ಚಾಗುತ್ತಿತ್ತು, ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ಸಿಗುತ್ತಿತ್ತು ಮತ್ತು ಸರಕು ಸಾಗಣೆಯನ್ನು ನಿರ್ವಹಿಸುವ ರಾಜ್ಯದ ಸಾಮರ್ಥ್ಯ ಹೆಚ್ಚಾಗುತ್ತಿತ್ತು. ಅಲ್ಲದೆ, ಮೀನುಗಾರರ ಜೀವನ ಮತ್ತು ಕರಾವಳಿ ಭಾಗದ ಆರ್ಥಿಕತೆ ಸುಧಾರಿಸುತ್ತದೆ. ಆದರೆ ಇದೆಲ್ಲವನ್ನೂ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಎಐಎಡಿಎಂಕೆ ನಿಲ್ಲಿಸಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಆರೋಪಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಸಿ ಎನ್ ಅಣ್ಣಾದೊರೈ ಮತ್ತು ಎಂ ಕರುಣಾನಿಧಿ ಅವರ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಸೇತುಸಮುದ್ರಂ ಯೋಜನೆಯನ್ನು ಪುನರುಜ್ಜೀವನಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಮಾಜಿ ಹಡಗು ಖಾತೆ ಸಚಿವ ಬಾಲು ಅವರನ್ನು ಸಿಎಂ ಸ್ಟಾಲಿನ್ ಒತ್ತಾಯಿಸಿದರು. ಇದು ಹಡಗು ಕಾಲುವೆ ನಿರ್ಮಾಣದ ಮೂಲಕ ಭಾರತ ಮತ್ತು ಶ್ರೀಲಂಕಾ ನಡುವೆ ಪಾಕ್ ಕೊಲ್ಲಿ ಮತ್ತು ಮನ್ನಾರ್ ಕೊಲ್ಲಿಯನ್ನು ಸಂಪರ್ಕಿಸುವ ಯೋಜನೆಯಾಗಿದೆ. ಸುಮಾರು ಆರು ದಶಕಗಳಿಂದ ಡಿಎಂಕೆ ಸಿದ್ಧಾಂತ ಗಟ್ಟಿಯಾಗಿ ಅಂಟಿಕೊಂಡಿರುವ ಬಾಲು ಅವರನ್ನು ಸ್ಟಾಲಿನ್ ಶ್ಲಾಘಿಸಿದರು.
ಇದನ್ನೂ ಓದಿ: ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಕ್ಯಾಬಿನೆಟ್ ಸೇರ್ಪಡೆ