ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ವಿಶೇಷ ಕಲಂ 370 ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದ್ದ ಆದೇಶದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ಅರ್ಜಿದಾರರಲ್ಲಿ ಒಬ್ಬರಾದ ಮುಜಾಫರ್ ಇಕ್ಬಾಲ್ ಖಾನ್ ಈ ಅರ್ಜಿ ಸಲ್ಲಿಸಿದ್ದಾರೆ.
2019ರಲ್ಲಿ ಕೇಂದ್ರ ಸರ್ಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿತ್ತು. ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. 370ರ ರದ್ದತಿಯನ್ನು 2023ರ ಡಿಸೆಂಬರ್ 11ರಂದು ಸುಪ್ರೀಂಕೋರ್ಟ್ ಸಿಂಧು ಎಂದು ಆದೇಶಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ತೀರ್ಪು ಪ್ರಕಟಿಸಿತ್ತು.
ಅಲ್ಲದೇ, ದೇಶದ ಸರ್ವೋಚ್ಛ ನ್ಯಾಯಾಲಯವು ತನ್ನ ತೀರ್ಪು ನೀಡುವಾಗ 2024ರ ಸೆಪ್ಟೆಂಬರ್ 30ರೊಳಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯದ ಸ್ಥಾನ - ಮಾನ ಮರುಸ್ಥಾಪಿಸಬೇಕು ಮತ್ತು ವಿಧಾನಸಭೆಗೆ ಚುನಾವಣೆಗಳನ್ನು ನಡೆಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಇದೀಗ ಈ ಆದೇಶದ ಕುರಿತು ಇಕ್ಬಾಲ್ ಖಾನ್ ಮರುಪರಿಶೀಲನಾ ಅರ್ಜಿ ಸಲ್ಲಿಸಿರುವುದರಿಂದ ಮತ್ತೆ ಕಾನೂನು ಹೋರಾಟವನ್ನು ಹುಟ್ಟುಹಾಕುವಂತಾಗಿದೆ.
ಸುಪ್ರೀಂ ಕೋರ್ಟ್ ತೀರ್ಪು ಹೇಳಿದ್ದೇನು?: ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತಾತ್ಕಾಲಿಕ. ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಮಾಡಿಕೊಂಡಿದ್ದ ಮಧ್ಯಂತರ ವ್ಯವಸ್ಥೆ ಇದು. ಅದನ್ನು ರದ್ದು ಮಾಡಿರುವುದು ತಪ್ಪಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.
ಹಿಂದೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರವು ದೇಶದ ಇತರ ರಾಜ್ಯಗಳಿಗಿಂತ ಭಿನ್ನವಾದ ಆಂತರಿಕ ಸಾರ್ವಭೌಮತ್ವ ಹೊಂದಿಲ್ಲ. ದೇಶದ ಸಂವಿಧಾನದ ಎಲ್ಲ ನಿಬಂಧನೆಗಳು ಆ ರಾಜ್ಯಕ್ಕೂ ಅನ್ವಯಿಸುತ್ತವೆ. ಸಂವಿಧಾನದ 370ನೇ ವಿಧಿ ತಾತ್ಕಾಲಿಕ ವ್ಯವಸ್ಥೆಯಾಗಿದ್ದ ಕಾರಣ, ಅದನ್ನು ಹಿಂತೆಗೆದುಕೊಳ್ಳುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್ ಅನ್ನು ಬೇರ್ಪಡಿಸಿ ಎರಡನ್ನೂ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ ನಿರ್ಧಾರವೂ ಸಿಂಧು ಎಂದು ಹೇಳಿತ್ತು.
ಜಮ್ಮು ಮತ್ತು ಕಾಶ್ಮೀರವು ಅಖಂಡ ಭಾರತದ ಅವಿಭಾಜ್ಯ ಅಂಗ. ಇದು ಸಂವಿಧಾನದ 1ನೇ ಮತ್ತು 370 ನೇ ವಿಧಿಯಿಂದ ವಿಧಿತವಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಸಾಂವಿಧಾನಿಕ ಆಡಳಿತ ಶಾಶ್ವತ ಸಂಸ್ಥೆಯಾಗಲು ಎಂದಿಗೂ ಉದ್ದೇಶಿಸಿರಲಿಲ್ಲ. ಕೇಂದ್ರ ಸರ್ಕಾರದ ಒಪ್ಪಿಗೆಯೊಂದಿಗೆ ರಾಷ್ಟ್ರಪತಿಗಳು ಸಂವಿಧಾನದ ಎಲ್ಲ ನಿಬಂಧನೆಗಳನ್ನು ಅನ್ವಯಿಸಬಹುದು. ರಾಷ್ಟ್ರಪತಿಗಳ ನಿರ್ಧಾರದ ಮೇಲೆ ಕೋರ್ಟ್ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿತ್ತು.
ಇದನ್ನೂ ಓದಿ: ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವೇ ತಾತ್ಕಾಲಿಕ, ರದ್ದು ಮಾಡಿದ್ದು ತಪ್ಪಲ್ಲ: ಕೇಂದ್ರದ ನಿರ್ಧಾರ ಎತ್ತಿಹಿಡಿದ ಸುಪ್ರೀಂ