ಹೈದರಬಾದ್ : ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷವನ್ನು ಸೋಲಿಸುವ ಮೂಲಕ ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸಿಎಂ ಆಗುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ದಶಕಗಳ ನಂತರ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಎಬಿವಿಪಿಯಿಂದ ಬೆಳೆದು ಬಂದ ನಾಯಕ: ಇದರೊಂದಿಗೆ ತೆಲಂಗಾಣದ ಕಾಂಗ್ರೆಸ್ ಅಧ್ಯಕ್ಷ ಅನುಮುಲಾ ರೇವಂತ್ ರೆಡ್ಡಿ ಅವರು ಮೊದಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಯಲ್ಲಿ ಸಕ್ರಿಯರಾಗಿದ್ದರು. ಎಬಿಬಿಪಿಯ ಅಂದಿನ ಖಡಕ್ ಕಾರ್ಯಕರ್ತ ಕಾಂಗ್ರೆಸ್ನ ಹಾಲಿ ಸಂಸದರಾಗಿದ್ದಾರೆ. ತೆಲಂಗಾಣ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹೊಂದಿರುವ ಇವರು, ಈ ಬಾರಿಯ ಚುನಾವಣೆಯಲ್ಲಿ ಪಕ್ಷ ಸಂಘಟನೆಗೆ ಟೊಂಕ ಕಟ್ಟಿ ನಿಂತವರು. ಇದೀಗ ಸಿಎಂ ಸ್ಥಾನಕ್ಕೆ ಕೇಳಿಬರುತ್ತಿರುವ ಮುಂಚೂಣಿ ಹೆಸರು ರೇವಂತ್ ರೆಡ್ಡಿ ಅವರದ್ದಾಗಿದೆ.
ಕಾಮರೆಡ್ಡಿ ಕ್ಷೇತ್ರದ ಅಭ್ಯರ್ಥಿಯಾಗಿರುವ ರೇವಂತ್ ರೆಡ್ಡಿ ಅವರು ಹಾಲಿ ಸಿಎಂ ಮತ್ತು ಬಿಆರ್‌ಎಸ್ ಅಭ್ಯರ್ಥಿ ಕೆ. ಚಂದ್ರಶೇಖರ ರಾವ್ ಅವರ ವಿರುದ್ಧ ಅಖಾಡಕ್ಕಿಳಿದಿದ್ದಾರೆ. ಇನ್ನು ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದ ಕೆಸಿಆರ್ ಕಾರು ತನ್ನ ಪ್ರಯಾಣ ನಿಲ್ಲಿಸಿದ್ದು, ಇಲ್ಲಿ ಬಿಆರ್ ಎಸ್ ಹಿನ್ನಡೆ ಅನುಭವಿಸಿದೆ.
ಉಸ್ಮಾನಿಯಾ ವಿವಿಯಲ್ಲಿ ಪದವಿ: ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದ ರೇವಂತ್ ರೆಡ್ಡಿ ವಿದ್ಯಾರ್ಥಿಯಾಗಿದ್ದಾಗಲೇ ಎಬಿವಿಪಿ ಸದಸ್ಯರಾಗಿದ್ದರು. ಮೊದಲಿನಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರಿಂದ 2007 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ರೇವಂತ್ ರೆಡ್ಡಿ ಎಂಎಲ್ಸಿ ಆಗಿ ಆಯ್ಕೆಯಾದರು. ನಂತರ ತೆಲುಗು ದೇಶಂ ಪಕ್ಷಕ್ಕೆ ಸೇರಿದ ಅವರು 2014 ರಲ್ಲಿ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 46.45 ಶೇಕಡಾ ಮತಗಳೊಂದಿಗೆ ಕೊಡಂಗಲ್ ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ್ದರು.
2017ರಲ್ಲಿ ಟಿಡಿಪಿ ತೊರೆದು ಕಾಂಗ್ರೆಸ್ ಸೇರಿ 2018 ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕೊಡಂಗಲ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಬಿಆರ್‌ಎಸ್ (ಆಗಿನ ಟಿಆರ್‌ಎಸ್) ಅಭ್ಯರ್ಥಿ ವಿರುದ್ಧ ಸೋಲಿನ ಕಹಿ ಕಂಡಿದ್ದರು. ಇದು ಅವರ ಚುನವಾಣೆಯ ಮೊದಲ ಸೋಲಾಗಿತ್ತು. ಬಳಿಕ 2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಕಾಜ್‌ಗಿರಿ ಕ್ಷೇತ್ರದಿಂದ ಸ್ಪರ್ಧೆಗಿಳಿದು 10,919 ಮತಗಳ ಅಂತರದಿಂದ ಸಂಸದರಾದರು.
ಈ ಎಲ್ಲ ಗೆಲುವಿನ ಲೆಕ್ಕಾಚಾರ ಮತ್ತು ಸಂಘಟನಾತ್ಮಕ ತಂತ್ರಗಾರಿಕೆಯನ್ನು ರೇವಂತ್ ರೆಡ್ಡಿ ಅವರಲ್ಲಿ ಕಂಡ ಕಾಂಗ್ರೆಸ್ ಹೈಕಮಾಂಡ್ 2021ರಲ್ಲಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿತು. ಈ ಸಂದರ್ಭದಲ್ಲಿ ಎನ್. ಉತ್ತಮ್ ಕುಮಾರ್ ರೆಡ್ಡಿ ಅವರನ್ನು ಕೆಳಗಿಳಿಸಿ ರೇವಂತ್ ರೆಡ್ಡಿಯನ್ನು ಆಯ್ಕೆ ಮಾಡಿದ್ದಕ್ಕೆ ಕಾಂಗ್ರೆಸ್‌ನೊಳಗೆ ಕೆಲವು ಭಿನ್ನಾಭಿಪ್ರಾಯಗಳು ಕೇಳಿಬಂದಿದ್ದವು. ಆದರೆ ಹೈಕಮಾಂಡ್ ರೇವಂತ್ ರೆಡ್ಡಿ ಅವರನ್ನು ಬೆಂಬಲಿಸಿತ್ತು. ಇದರೊಂದಿಗೆ ಈ ಬಾರಿ ತೆಲಂಗಾಣ ಚುನಾವಣೆಯಲ್ಲಿ ಹಾಲಿ ಸಿಎಂ ಕೆಸಿಆರ್ ವಿರುದ್ಧ ಕಾಂಗ್ರೆಸ್ನಿಂದ ರೇವಂತ್ ರೆಡ್ಡಿ ಅವರನ್ನು ಕಣಕ್ಕಿಳಿಸುವ ಮೂಲಕ ರಾಜ್ಯದಲ್ಲಿ ದೊಡ್ಡ ನಾಯಕ ಎಂದು ಬಿಂಬಿಸಲಾಗಿತ್ತು.
ಇಂದು ತೆಲಂಗಾಣ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಗೆಲುವಿನತ್ತ ಸಾಗುತ್ತಿದೆ. ಕೆಲವೆಡೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದಾರೆ. ಸಂಪೂರ್ಣ ಚುನಾವಣಾ ಫಲಿತಾಂಶ ಹೊರಬೀಳುವ ಮುನ್ನವೇ ಇಡೀ ರಾಜ್ಯದ ಜನತೆ ಕಾಂಗ್ರೆಸ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಪಿಸಿಸಿ ಅಧ್ಯಕ್ಷರಾದ ರೇವಂತ್ ರೆಡ್ಡಿ ಮನೆಗೆ ಭದ್ರತೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ : ತೆಲಂಗಾಣ ಫಲಿತಾಂಶ: ಯಾರಿಗೆ ಮುನ್ನಡೆ, ಯಾರಿಗೆ ಹಿನ್ನಡೆ?