ಭೋಪಾಲ್ (ಮಧ್ಯಪ್ರದೇಶ): ನಿವೃತ್ತ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ. ಪ್ರೇಮ್ ಸಿನ್ಹಾ (63) ಮೃತರು. ಇವರು ಖಿನ್ನತೆಯಿಂದ ಬಳಲುತ್ತಿದ್ದರು. ಸಾವಿಗೂ ಮುನ್ನ ಬರೆದಿಟ್ಟ ಡೆತ್ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
''ಉಮರಿಯಾ ಜಿಲ್ಲಾ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿದ ನಂತರ ಪ್ರೇಮ್ ಸಿನ್ಹಾ ನ್ಯಾಯಾಧೀಕರಣವೊಂದರ ಸದಸ್ಯರಾಗಿ ನೇಮಕಗೊಂಡಿದ್ದರು. ಕಳೆದ ಒಂದೆರಡು ತಿಂಗಳಿಂದ ಖಿನ್ನತೆಗೆ ಜಾರಿದ್ದರು. ಶಾಂತವಾಗಿರಲು ಒಂಟಿಯಾಗಿ ವಾಸಿಸಲು ಆರಂಭಿಸಿದ್ದರು. ಖಿನ್ನತೆಗೆ ವೈದ್ಯರ ಬಳಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಎಂದಿನಂತೆ ಸೋಮವಾರ ರಾತ್ರಿ ನಿದ್ರಿಸಲು ತಮ್ಮ ಕೊಠಡಿಗೆ ತೆರಳಿದ್ದರು. ಆದರೆ, ಬೆಳಗಿನ ಜಾವ 4ರ ಸುಮಾರಿಗೆ ಎಚ್ಚರಗೊಂಡಿದ್ದ ಪತ್ನಿ, ಪತಿಯನ್ನು ಗಮನಿಸಿದಾಗ ಅವರು ಹಾಸಿಗೆಯಲ್ಲಿ ಇರಲಿಲ್ಲ. ಮನೆಯ ಆವರಣದಲ್ಲಿರುವ ಟಿನ್ ಶೆಡ್ನಲ್ಲಿ ಪರಿಶೀಲಿಸಿದಾಗ ಅಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂಬುವುದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ'' ಎಂದು ಹಬೀಬ್ಗಂಜ್ ಪೊಲೀಸ್ ಠಾಣೆ ಉಸ್ತುವಾರಿ ಮನೀಶ್ ರಾಜ್ ಭಡೋರಿಯಾ ಮಾಹಿತಿ ನೀಡಿದ್ದಾರೆ.
ಮುಂದುವರೆದು ಮಾತನಾಡಿದ ಅಧಿಕಾರಿ, ''ನೇಣು ಬಿಗಿದ ಸ್ಥಿತಿಯಲ್ಲಿದ್ದ ಅವರನ್ನು ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಗ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಖಚಿತಪಡಿಸಿದರು. ಸಾವಿಗೆ ಶರಣಾದ ಸ್ಥಳದಲ್ಲಿ ಡೆತ್ನೋಟ್ ಸಿಕ್ಕಿದೆ. ನಕಾರಾತ್ಮಕ ಆಲೋಚನೆಗಳಿಂದಾಗಿ ತಾವು ಮಾನಸಿಕವಾಗಿ ವಿಚಲಿತಗೊಂಡು ಈ ಕಠಿಣ ನಿರ್ಧಾರ ತೆಗೆದುಕೊಂಡಿರುವುದಾಗಿ ಡೆತ್ನೋಟ್ ಉಲ್ಲೇಖಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ'' ಎಂದರು.
ಇದನ್ನೂ ಓದಿ: ಮಂಗಳೂರು: ಗುಂಡು ಹಾರಿಸಿಕೊಂಡು ಕರ್ತವ್ಯನಿರತ ಸಿಐಎಸ್ಎಫ್ ಪಿಎಸ್ಐ ಆತ್ಮಹತ್ಯೆ
ದೆಹಲಿಯಲ್ಲಿ ನ್ಯಾಯಾಧೀಶೆ ಆತ್ಮಹತ್ಯೆ ಪ್ರಕರಣ: ಕಳೆದ ವರ್ಷ ದೆಹಲಿಯಲ್ಲಿ ಮಹಿಳಾ ನ್ಯಾಯಾಧೀಶರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. 42 ವರ್ಷದ ನ್ಯಾಯಾಧೀಶೆ ಸಾವಿಗೂ ಎರಡು ದಿನಗಳ ಮೊದಲು ಕಾಣೆಯಾಗಿದ್ದರು. ನಂತರ ರಾಜ್‌ಪುರ ಪ್ರದೇಶದಲ್ಲಿದ್ದ ತಮ್ಮ ಸಹೋದರನ ಮನೆಯಲ್ಲಿ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.
ಮಾರುಕಟ್ಟೆಗೆ ಹೋಗಿದ್ದ ಅವರು ಮರಳಿ ಮನೆಗೆ ಬಂದಿರಲಿಲ್ಲ. ಆದ್ದರಿಂದ ಪತ್ನಿ ಕಾಣೆಯಾದ ಬಗ್ಗೆ ಪತಿ ಪೊಲೀಸರಿಗೆ ನೀಡಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ರಾಜ್‌ಪುರ ಪ್ರದೇಶದ ಮನೆಯಲ್ಲಿ ಅವರ ಮೃತದೇಹ ಪತ್ತೆ ಮಾಡಿದ್ದರು. ಸ್ಥಳದಲ್ಲಿ ಮೂರು ಡೆತ್ನೋಟ್ಗಳು ದೊರೆತಿದ್ದವು. ಸಾಕೇತ್ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದ ಮಹಿಳೆಯ ಪತಿ ಕೂಡ ನ್ಯಾಯಾಧೀಶರಾಗಿದ್ದಾರೆ.
ಇದನ್ನೂ ಓದಿ: ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಮಹಿಳಾ ನ್ಯಾಯಾಧೀಶೆ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ