ಹೈದರಾಬಾದ್: ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯ ಪ್ರಚಾರ ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ. ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ, ಕಾಂಗ್ರೆಸ್, ಎಡ ಪಕ್ಷಗಳು ಸೇರಿದಂತೆ ಇತರ ರಾಜಕೀಯ ಪಕ್ಷಗಳು ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.
ಪಶ್ಚಿಮ ಬಂಗಾಳದ ಸದ್ಯದ ರಾಜಕೀಯ ಸ್ಥಿತಿಯನ್ನು ಸಮಗ್ರವಾಗಿ ಅವಲೋಕಿಸಿದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಒಂದು ಕಡೆ ಪ್ರಬಲ ಶಕ್ತಿಯಾಗಿದ್ದರೆ, ಇನ್ನುಳಿದ ಎಲ್ಲ ಪಕ್ಷಗಳು ಒಟ್ಟಾಗಿ ಅದನ್ನು ಎದುರಿಸುತ್ತಿರುವ ಸ್ಥಿತಿ ಇದೆ.
ಪಶ್ಚಿಮ ಬಂಗಾಳದಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೇರಲು ಕೇಸರಿ ಪಡೆ ಪ್ರಯತ್ನ ನಡೆಸುತ್ತಿದ್ದರೆ, ಸಿಎಂ ಮಮತಾ ಬ್ಯಾನರ್ಜಿ ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿದ್ದಾರೆ. ಒಂದೊಮ್ಮೆ ಮೂರನೇ ಬಾರಿಗೆ ಮಮತಾ ಸಿಎಂ ಆದಲ್ಲಿ ಅವರು ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಳ್ಳುವ ಪ್ರಮುಖ ರಾಜಕಾರಣಿಯಾಗಿ ಬೆಳೆಯುವ ಸಾಧ್ಯತೆಗಳಿವೆ.
ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರೋಧಿ ಗುಂಪಿನ ನೇತಾರಳಾಗಿ ಗುರುತಿಸಿಕೊಳ್ಳಬೇಕೆನ್ನುವ ಮಮತಾ ಅವರ ಆಸೆ ರಹಸ್ಯವಾಗಿ ಉಳಿದಿಲ್ಲ. ಆಗಾಗ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸುತ್ತ ತಾನು ಬಿಜೆಪಿಯ ಕಡು ವಿರೋಧಿ ಎಂಬ ಸಂದೇಶ ರವಾನಿಸುತ್ತಲೇ ಇರುತ್ತಾರೆ.
ದೇಶದ ರಾಜಕೀಯ ರಂಗದಲ್ಲಿ ಸದ್ಯ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ದಿನ ಕಳೆದಂತೆ ತನ್ನ ವರ್ಚಸ್ಸು ಕಳೆದುಕೊಳ್ಳುತ್ತಿದೆ. ಹೀಗಾಗಿ ಭಾರತೀಯ ಜನತಾ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಇದ್ದ ಏಕೈಕ ಪರ್ಯಾಯವೂ ಕಣ್ಮರೆಯಾಗುತ್ತಿದೆ.
ಪ್ರಸ್ತುತ ಬಂಗಾಳ ಚುನಾವಣೆಯಲ್ಲಿ ಕಾಂಗ್ರೆಸ್ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಟಿಎಂಸಿ ವಿರುದ್ಧ ಸ್ಪರ್ಧಿಸುತ್ತಿದೆ. ಹೀಗೆ ತಮ್ಮಲ್ಲೇ ಕಚ್ಚಾಡಿಕೊಳ್ಳುತ್ತಿರುವ ಈ ಪಕ್ಷಗಳು ಬಿಜೆಪಿ ವಿರೋಧಿ ಮತಗಳನ್ನು ಚೂರು ಚೂರಾಗಿ ಒಡೆದು ಬಿಜೆಪಿಗೆ ಲಾಭ ಮಾಡಿಕೊಡುತ್ತಿವೆ. ಹೀಗೆ ತಾವು ಮಾಡುತ್ತಿರುವ ಕೆಲಸದ ಅರಿವು ಈ ಪಕ್ಷಗಳಿಗೆ ಇಲ್ಲವೆಂದೇನಿಲ್ಲ.
ಕಳೆದ ಕೆಲ ವರ್ಷಗಳಿಂದ ಬಿಜೆಪಿ ಹಿಂದುತ್ವ ಹಾಗೂ ರಾಷ್ಟ್ರವಾದದ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ಬಂಗಾಳದಲ್ಲಿ ರಾಜಕಾರಣ ಮಾಡುತ್ತಿದೆ. ಅದರ ಈ ಅಸ್ತ್ರಗಳು ಲಾಭ ಸಹ ತಂದು ಕೊಟ್ಟಿವೆ. 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಂಗಾಳದ ಒಟ್ಟು 42 ಸ್ಥಾನಗಳ ಪೈಕಿ ಬಿಜೆಪಿ 18ರಲ್ಲಿ ಜಯ ದಾಖಲಿಸಿದ್ದೇ ಇದಕ್ಕೆ ಸಾಕ್ಷಿ.
ಅಲ್ಲಿಂದೀಚೆಗೆ ಕೇಸರಿ ಪಕ್ಷವು ಮತ್ತಷ್ಟು ಬಿರುಸಿನಿಂದ ರಾಜ್ಯದಲ್ಲಿ ಮುನ್ನುಗ್ಗುತ್ತಿದ್ದು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ ಶಾ ಸೇರಿದಂತೆ ಮುಂಚೂಣಿಯ ನಾಯಕರು ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಜೊತೆಗೆ ದೀದಿ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರಗಳನ್ನು ಜನರ ಮುಂದೆ ಬಿಚ್ಚಿಡುತ್ತಿದ್ದಾರೆ.
ಮಮತಾ ದೀದಿ ಸಹ ತನ್ನೆಲ್ಲ ಶಕ್ತಿ ಸಾಮರ್ಥ್ಯ ಬಳಸಿ ಬಿಜೆಪಿ ವಿರುದ್ಧ ಏಕಾಂಗಿಯಾಗಿಯೇ ಹೋರಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷವೊಂದರ ವಿರುದ್ಧ ಮಮತಾ ಏಕಾಂಗಿ ಹೋರಾಟ ಶ್ಲಾಘನೀಯ ಹೌದು. ಒಂದೊಮ್ಮೆ ಈ ಚುನಾವಣೆಯಲ್ಲಿ ಮಮತಾ ಗೆದ್ದರೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಅಶ್ವಮೇಧ ಕುದುರೆಯನ್ನು ತಡೆಗಟ್ಟಬಲ್ಲ ಏಕೈಕ ರಾಜಕೀಯ ನೇತಾರ ಅವರಾಗಲಿದ್ದಾರೆ. ಆಗ ಸಹಜವಾಗಿಯೇ ಅವರು ಬಿಜೆಪಿ ವಿರುದ್ಧದ ಮೈತ್ರಿ ಗುಂಪಿನ ನೇತೃತ್ವ ವಹಿಸಿಕೊಳ್ಳಬಹುದು.
ಮಮತಾ ದೀದಿ ರಾಷ್ಟ್ರಮಟ್ಟದಲ್ಲಿ ನೇತಾರರಾಗಿ ಗುರುತಿಸಿಕೊಳ್ಳುವುದನ್ನು ಕಾಂಗ್ರೆಸ್ ಯಾವುದೇ ಕಾರಣಕ್ಕೂ ಒಪ್ಪಲಾರದು. ಆದರೆ ಕಾಂಗ್ರೆಸ್ ಹೊರತುಪಡಿಸಿದರೆ ಬಹುತೇಕ ಇತರ ಎಲ್ಲ ಬಿಜೆಪಿ ವಿರೋಧಿ ಪಕ್ಷಗಳು ಅವರ ಬೆಂಬಲಕ್ಕೆ ನಿಂತಿರುವುದು ಸ್ಪಷ್ಟ.
ಅಂಕಣ: ಅಮಿತ್ ಅಗ್ನಿಹೋತ್ರಿ, ಹಿರಿಯ ಪತ್ರಕರ್ತರು