ಪಾಟ್ನಾ: 2014ರಲ್ಲಿ ನಡೆದ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಬಿಹಾರ ಸರ್ಕಾರದ ಸಚಿವ ಕಾರ್ತಿಕ್ ಕುಮಾರ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ಜೋರಾದ ಹಿನ್ನೆಲೆಯಲ್ಲಿ ಸಚಿವರು ಅನಿವಾರ್ಯವಾಗಿ ಸ್ಥಾನ ತ್ಯಜಿಸಿದ್ದಾರೆ.
ನೂತನವಾಗಿ ಅಧಿಕಾರಕ್ಕೆ ಬಂದ ನಿತೀಶ್ ಕುಮಾರ್ ಸರ್ಕಾರದಲ್ಲಿ ರಾಜ್ಯದ ಕಾನೂನು ಸಚಿವರಾಗಿದ್ದ ಆರ್‌ಜೆಡಿ ಎಂಎಲ್‌ಸಿ ಕಾರ್ತಿಕ್ ಕುಮಾರ್ ಸಿಂಗ್ ಅವರ ಖಾತೆಯನ್ನು ಬದಲಾಯಿಸಿ ಬುಧವಾರ ರಾತ್ರಿ ಕಬ್ಬು ಇಲಾಖೆಯನ್ನು ವಹಿಸಲಾಗಿತ್ತು. ಇದಾಗಿ ಕೆಲವೇ ಗಂಟೆಗಳ ನಂತರ ಅವರು ರಾಜೀನಾಮೆ ನೀಡಿದರು. ರಾಜೀನಾಮೆಯನ್ನು ಅಂಗೀಕರಿಸಿ ರಾಜ್ಯಪಾಲರಿಗೆ ರವಾನಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಕಂದಾಯ ಮತ್ತು ಭೂ ಸುಧಾರಣಾ ಸಚಿವ ಅಲೋಕ್ ಕುಮಾರ್ ಮೆಹ್ತಾ ಅವರಿಗೆ ಕಬ್ಬು ಇಲಾಖೆಯ ಹೆಚ್ಚುವರಿ ಹೊಣೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿಯೊಂದಿಗೆ ಹೆಚ್ಚಿನ ಒಲವು ಹೊಂದಿರುವ, ರಾಜಕೀಯವಾಗಿ ಪ್ರಬಲವಾಗಿರುವ ಭೂಮಿಹಾರ್ ಸಮುದಾಯದ ಜನತೆಯನ್ನು ತಮ್ಮೊಂದಿಗೆ ಸೆಳೆಯುವ ಆರ್‌ಜೆಡಿ ಪಕ್ಷದ ತಂತ್ರದ ಭಾಗವಾಗಿ ತೇಜಸ್ವಿ ಯಾದವ್, ಕಾರ್ತಿಕ್ ಕುಮಾರ್ ಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು ಎನ್ನಲಾಗಿದೆ. ಅಪಹರಣ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಸಚಿವರ ವಿರುದ್ಧ ಬಿಜೆಪಿ ಭಾರಿ ಪ್ರತಿಭಟನೆ ನಡೆಸಿತ್ತು.