ನವದೆಹಲಿ: ದೆಹಲಿಯ ಇಂಡಿಯಾ ಗೇಟ್ ಬಳಿಯ ರಾಜಪಥವನ್ನು, ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, "ಎಲ್ಲಾ ರಾಜಭವನಗಳನ್ನು ಕರ್ತವ್ಯ ಭವನಗಳನ್ನಾಗಿ ಮಾಡಬಾರದೇಕೆ" ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ, "ರಾಜಪಥಕ್ಕೆ ಕರ್ತವ್ಯಪಥ ಎಂದು ಮರುನಾಮಕರಣ ಮಾಡಬೇಕಾದರೆ, ಎಲ್ಲ ರಾಜಭವನಗಳು ಕರ್ತವ್ಯ ಭವನಗಳಾಗಬೇಕಲ್ಲವೇ" ಎಂದು ಪ್ರಶ್ನಿಸಿರುವ ತರೂರ್, "ಹೆಸರು ಬದಲಾವಣೆ ಇಲ್ಲಿಗೆ ನಿಲ್ಲಿಸಬೇಡಿ. ರಾಜಸ್ಥಾನವನ್ನೂ ಕರ್ತವ್ಯಸ್ಥಾನ ಎಂದು ಬದಲಿಸಿ" ಎಂದು ಸಲಹೆ ನೀಡಿದ್ದಾರೆ.
ಸೆಪ್ಟೆಂಬರ್ 8 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇಂಡಿಯಾ ಗೇಟ್ ಬಳಿಯಿರುವ ರಾಜಪಥಕ್ಕೆ ಕರ್ತವ್ಯಪಥ ಎಂದು ಬದಲಿಸಿದ ರಸ್ತೆಗೆ ಚಾಲನೆ ನೀಡಿದರು. ರಾಜಪಥ ಎಂಬುದು ವಸಾಹತುಶಾಹಿಯ, ದಾಸ್ಯದ ಸಂಕೇತವಾಗಿದೆ. ನವಭಾರತ ಮತ್ತು ಸ್ವಾಭಿಮಾನದ ಸಂಕೇತವಾಗಿ ಕರ್ತವ್ಯಪಥ ಎಂದು ಮರು ನಾಮಕರಣ ಮಾಡಲಾಗಿದೆ.
ಇದಲ್ಲದೇ, ಇಂಡಿಯಾ ಗೇಟ್ ಬಳಿ ಇದ್ದ ಕಿಂಗ್ ಜಾರ್ಜ್ ಪುತ್ಥಳಿ ಜಾಗದಲ್ಲಿ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಎತ್ತರದ ಏಕಶಿಲಾ ವಿಗ್ರಹವನ್ನು ಅನಾವರಣ ಮಾಡಲಾಗಿದೆ.
ಓದಿ: ಬೆಂಗಳೂರು ಅಭಿವೃದ್ಧಿಗೆ ಕಾಂಗ್ರೆಸ್ನಿಂದ ಸಮಿತಿ: ಬೆಟರ್ ಬೆಂಗಳೂರು ಕ್ರಿಯಾ ಸಮಿತಿಯಲ್ಲಿ ಯಾರೆಲ್ಲಾ?