ವಿಶಾಖಪಟ್ಟಣಂ (ಆಂಧ್ರಪ್ರದೇಶ): ಆಂಧ್ರ ಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ವಿಶಾಖಪಟ್ಟಣಂ ಸಂಸದ ಎಂ.ವಿ.ವಿ. ಸತ್ಯನಾರಾಯಣ ಅವರ ಪತ್ನಿ ಮತ್ತು ಪುತ್ರ ಹಾಗೂ ಅವರ ಲೆಕ್ಕ ಪರಿಶೋಧಕರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿ ಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ. ಮೂವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ದುಷ್ಕರ್ಮಿಗಳು ಕ್ರೂರಿಗಳ ರೀತಿ ವರ್ತಿಸಿದ್ದಾರೆ. ಇದು ಒಟಿಟಿಯಲ್ಲಿನ ಕ್ರೈಂ ವೆಬ್ ಸಿರೀಸ್ ದೃಶ್ಯಗಳನ್ನು ನೆನಪಿಸುವಂತಿದೆ.
ಸತ್ಯನಾರಾಯಣ ಅವರ ಪತ್ನಿ ಜ್ಯೋತಿ ಹಾಗೂ ಪುತ್ರ ಶರತ್ ಚಂದ್ರ ಅವರನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿತ್ತು. ಹೀಗಾಗಿ ಒಂದು ಕೋಟಿ ರೂ. ಹಣವನ್ನು ಸಂಸದರ ಆಪ್ತರಾದ ಲೆಕ್ಕ ಪರಿಶೋಧಕ ಜಿ. ವೆಂಕಟೇಶ್ವರ್ ರಾವ್ ನೀಡಲು ಹೋದಾಗ ಅವರನ್ನೂ ದುಷ್ಕರ್ಮಿಗಳು ಒತ್ತೆಯಾಗಿ ಇರಿಸಿಕೊಂಡಿದ್ದರು. ಕ್ರಿಕೆಟ್ ಬ್ಯಾಟ್‌ಗಳಿಂದ ಮನಬಂದಂತೆ ಥಳಿಸಿ, ಚಾಕುವಿನಿಂದ ಬೆದರಿಸಿದ್ದರು. ಆಡಳಿತ ಪಕ್ಷದ ಪ್ರಮುಖ ಜನಪ್ರತಿನಿಧಿ ಹಾಗೂ ಸಂಸದರ ಕುಟುಂಬದವರು ಕಿಡ್ನಾಪ್ ಆಗ ಎರಡು ದಿನ ಯಾರಿಗೂ ತಿಳಿಯದೇ ಇರುವುದಕ್ಕೆ ಇದೇ ಪ್ರಮುಖ ಕಾರಣ ಎಂದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ನಿರ್ಜನ ಪ್ರದೇಶದಲ್ಲಿ ಮನೆ: ವಿಶಾಖಪಟ್ಟಣಂನಲ್ಲಿರುವ ಸಂಸದರ ಮನೆಗೆ ಡೇಗಾ ಗ್ಯಾಂಗ್ ಎಂದು ಕರೆಯಲ್ಪಡುವ ಎಂಟು ಜನ ಕ್ರಿಮಿನಲ್‌ಗಳು ನುಗ್ಗಿದ್ದರು. ಈ ಮನೆಯನ್ನು ಸಂಸದರ ಪುತ್ರ ವಿಹಾರಕ್ಕೆ, ವಿಶ್ರಾಂತಿಗಾಗಿ ಹೆಚ್ಚಾಗಿ ಬಳಸುತ್ತಾರೆ. ಹೀಗಾಗಿ ಮನೆಯಲ್ಲಿ ಸಿಸಿಟಿವಿ ಕ್ಯಾಮರಾಗಳು, ಭದ್ರತಾ ಸಿಬ್ಬಂದಿ ಇರಲ್ಲ. ಇದು ನಿರ್ಜನ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಇನ್ನೂ ಯಾವುದೇ ವಸತಿ ಸಂಕೀರ್ಣಗಳು ಅಭಿವೃದ್ಧಿ ಆಗಿಲ್ಲ. ಈ ಪ್ರದೇಶದಲ್ಲಿ ಏನು ನಡೆಯುತ್ತಿದೆ ಎಂದು ಹೊರಗಿನ ಪ್ರಪಂಚಕ್ಕೆ ಗೊತ್ತಾಗುವುದಿಲ್ಲ ಎನ್ನಲಾಗುತ್ತಿದೆ.
ಇದನ್ನೇ ತಮ್ಮ ಬಂಡವಾಳ ಹಾಗೂ ಅವಕಾಶವನ್ನಾಗಿ ಪರಿವರ್ತಿಸಿದ ಡೇಗಾ ಗ್ಯಾಂಗ್ ಮನೆ ಹೊಕ್ಕು ಮೊದಲು ಸಂಸದರ ಮಗನನ್ನು ಹಿಡಿದುಕೊಂಡಿದ್ದರು. ಅಲ್ಲದೇ, ಸಂಸದರ ಮಗನಿಗೆ ಮನಬಂದಂತೆ ಥಳಿಸಿ ಕೊಲೆ ಬೆದರಿಕೆ ಹಾಕಿದ್ದರು. ಇದೇ ವೇಳೆ, ಅವರ ತಾಯಿಗೆ ಕರೆ ಮಾಡಿ ಬರುವಂತೆ ಹೇಳಿದ್ದರು. ನಂತರದಲ್ಲಿ ಆಪ್ತ ಜಿ. ವೆಂಕಟೇಶ್ವರ್ ರಾವ್ ಅವರಿಗೂ ಫೋನ್ ಮಾಡಿ ಕರೆಸಿಕೊಂಡಿದ್ದರು. ಹೀಗಾಗಿ ಮೂವರಿಂದ ದುಷ್ಕರ್ಮಿಗಳು ಕಾಲಕಾಲಕ್ಕೆ 1.70 ಕೋಟಿ ರೂಪಾಯಿ ಸಂಗ್ರಹಿಸಿದ್ದರು.
ಸ್ಥಳದಲ್ಲೇ ಹಣ ಹಂಚಿಕೆ: ಅಲ್ಲದೇ, ಸಂಸದರ ಪತ್ನಿ ಬಳಿಯಿದ್ದ ಎಲ್ಲ ಚಿನ್ನಾಭರಣ ಪಾತಕಿಗಳು ದೋಚಿಕೊಂಡಿದ್ದರು. ಸುಲಿಗೆ ಮಾಡಿದ್ದ ಈ ಎಲ್ಲ ಹಣವನ್ನು ಸಂತ್ರಸ್ತರ ಮುಂದೆ ಹಂಚಿಕೊಳ್ಳಲು ಆರಂಭಿಸಿದ್ದರು. ದರೋಡೆಕೋರರಾದ ಹೇಮಂತ್ ಮತ್ತು ಗಾಜುವಾಕ ರಾಜೇಶ್ ಹೆಚ್ಚಿನ ಪಾಲು ತೆಗೆದುಕೊಂಡು, ಇತರರಿಗೆ ಸಣ್ಣ ಮೊತ್ತವನ್ನು ಹಂಚಿದ್ದರು. ಅಷ್ಟೇ ಅಲ್ಲ, ದರೋಡೆಕೋರನೊಬ್ಬ ತನ್ನ ಮಾಜಿ ಗೆಳತಿಗೆ 40 ಲಕ್ಷ ರೂ. ನೀಡುವಂತೆ ಸಂಸದರ ಪತ್ನಿ, ಮಗ ಹಾಗೂ ಆಪ್ತನಿಗೆ ಒತ್ತಡ ಹೇರಿದ್ದ. ಅಸಹಾಯಕ ಪರಿಸ್ಥಿತಿಯಲ್ಲಿ ಇದಕ್ಕೂ ಅವರು ಒಪ್ಪಿಕೊಂಡಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಇಡೀ ರಾಜ್ಯದಲ್ಲಿ ನಮ್ಮ ಗ್ಯಾಂಗ್‌ಗಳಿವೆ: ಎರಡೂವರೆ ದಿನ ನಿರಂತರವಾಗಿ ಮದ್ಯ, ಗಾಂಜಾ ಸೇವಿಸಿದ್ದ ದರೋಡೆಕೋರರು, ತಮ್ಮ ವಶದಲ್ಲಿದ್ದ ಸಂಸದರ ಪುತ್ರ ಶರತ್ ಚಂದ್ರ ಹಾಗೂ ವೆಂಕಟೇಶ್ವರ್ ರಾವ್ಗೆ ಬೆದರಿಕೆ ಹಾಕಲು ಶುರು ಮಾಡಿದ್ದರು. ಯಾವ ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ. ನಾವು ರಾಜ್ಯಾದ್ಯಂತ ಗ್ಯಾಂಗ್‌ಗಳನ್ನು ಹೊಂದಿದ್ದೇವೆ. ಅಪಹರಣಕಾರರೊಂದಿಗೆ ವ್ಯಾಪಕ ಸಂಪರ್ಕವನ್ನು ಹೊಂದಿದ್ದೇವೆ. ಪೊಲೀಸರು ನಮ್ಮ ಮೇಲೆ ಕೇಸು ಹಾಕಿದರೂ ಒಂದು ತಿಂಗಳು ಜೈಲಿನಲ್ಲಿದ್ದು ಹೊರಗೆ ಬರುತ್ತೇವೆ. ಅದಕ್ಕಿಂತ ಹೆಚ್ಚೇನೂ ಇಲ್ಲ ಆಗಲ್ಲ ಎಂದು ಹೇಳುತ್ತಿದ್ದರು.
ಈ ಕೃತ್ಯ ಪೊಲೀಸರಿಗೆ ಗೊತ್ತಾಗಿದೆ ಎಂದು ಅರಿತ ಕೂಡಲೇ ಅಪಹರಣಕಾರರು ಶರತ್ ಚಂದ್ರ ಹಾಗೂ ವೆಂಕಟೇಶ್ವರ್ ರಾವ್ ಅವರನ್ನು ಬೇರೆಡೆ ಸಾಗಿಸಲು ಯತ್ನಿಸಿದ್ದರು. ಸಂಸದರ ಪುತ್ರನ ಕಾಲು, ಕೈಗಳನ್ನು ಕಟ್ಟಿ ಕಾರಿನ ಟ್ರಂಕ್‌ಗೆ ಹಾಕಿ ವಾಹನದಲ್ಲಿ ಕರೆದುಕೊಂಡು ಹೋಗಿದ್ದರು. ವೆಂಕಟೇಶ್ವರ್ ರಾವ್ ಅವರನ್ನೂ ಡಿಕ್ಕಿಯೊಳಗೆ ಎಸೆಯಲು ಯತ್ನಿಸಿದ್ದರು. ಆದರೆ, ಹೀಗೆ ಮಾಡಿದರೆ ನಾನು ಸಾಯುತ್ತೇನೆ ಎಂದು ಹೇಳಿದಾಗ, ಕಾರಿನ ಒಳಗೆ ಕೂರಲು ಅವಕಾಶ ನೀಡಿದ್ದರು ಎಂದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಆಂಧ್ರ ಸಂಸದರ ಪತ್ನಿ-ಪುತ್ರ, ಹಣ ನೀಡಲು ಹೋದ ಆಪ್ತನೂ ಕಿಡ್ನಾಪ್: ಕೆಲವೇ ಗಂಟೆಗಳಲ್ಲಿ ಮೂವರ ರಕ್ಷಣೆ