ಅಗರ್ತಲಾ(ತ್ರಿಪುರ): ಬಾಂಗ್ಲಾದಲ್ಲಿ ದೇವಸ್ಥಾನಗಳನ್ನು ರಕ್ಷಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಇತರೆ ಹಿಂದೂಪರ ಸಂಘಟನೆಗಳು ಪ್ರತಿಭಟನಾ ರ್ಯಾಲಿ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ತ್ರಿಪುರಾದಲ್ಲಿರುವ ಮಸೀದಿಗಳು ಹಾಗೂ ಇತರೆ ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ನಿನ್ನೆ, ಪಾಣಿಸಾಗರ್ ಹಾಗೂ ಧರ್ಮನಗರಗಳಲ್ಲಿ ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆದಿದೆ. ಹೀಗಾಗಿ, ಎರಡೂ ನಗರಗಳಲ್ಲಿ ನಿಷೇಧಾಜ್ಞೆ (144 ಸೆಕ್ಷನ್) ಜಾರಿಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದೊಡ್ಡ ದೊಡ್ಡ ಮಸೀದಿಗಳ ಸುತ್ತಮುತ್ತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಐಡಿ ಬಳಸಿ ಕೆಲ ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಜನರು ಇಂಥ ನಕಲಿ ಸುದ್ದಿಗಳಿಗೆ ಬೆಂಬಲಿಸಬೇಡಿ. ಫೇಕ್ ಐಡಿ ಕ್ರಿಯೇಟ್ ಮಾಡಿರುವವರ ವಿರುದ್ಧ ಹಾಗೂ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವವರ ವಿರುದ್ಧ ಈಗಾಗಲೇ ಪ್ರಕರಣಗಳನ್ನು ದಾಖಲಿಸಿದ್ದೇವೆ. ಅಂಥವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತ್ರಿಪುರಾ ಪೊಲೀಸರು ಸರಣಿ ಟ್ವೀಟ್ ಮಾಡಿದ್ದಾರೆ.
ತ್ರಿಪುರಾದ ಎಲ್ಲಾ ಮಸೀದಿಗಳನ್ನು ರಕ್ಷಿಸುವಂತೆ ಕೋರಿ ಜಮಿಯತ್ ಉಲಮಾ-ಇ-ಹಿಂದ್ನ ಶಾಖೆ ಸರ್ಕಾರಕ್ಕೆ ಒತ್ತಾಯಿಸಿದೆ. ತ್ರಿಪುರಾದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತ್ರಿಪುರಾ ಜಮಿಯತ್ ಉಲಮಾ ಅಧ್ಯಕ್ಷ ಮುಫ್ತಿ ತಯೆಬುರ್ ರೆಹಮಾನ್ ಹೇಳಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ಹಿಂಸಾಚಾರದಲ್ಲಿ ಇದುವರೆಗೆ 100 ಮಂದಿ ಬಂಧನ; ಆರೋಪಿಗಳ ತಪ್ಪೊಪ್ಪಿಗೆ, ಮುಂದುವರೆದ ತನಿಖೆ
ಪೊಲೀಸ್ ವಕ್ತಾರ ಸುಬ್ರತಾ ಚಕ್ರವರ್ತಿ ಮಾತನಾಡಿ, ಎಲ್ಲಾ ಜಿಲ್ಲೆಗಳ ಎಸ್ಪಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಮಸೀದಿಗಳಿಗೆ ಭದ್ರತೆ ಒದಗಿಸಲು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗಲು ಸೂಚಿಸಲಾಗಿದೆ ಎಂದರು.
ವಿಎಚ್‌ಪಿ, ಆಡಳಿತಾರೂಢ ಬಿಜೆಪಿ, ಸಿಪಿಐ-ಎಂ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಬಾಂಗ್ಲಾದ ಕೋಮು ಹಿಂಸಾಚಾರವನ್ನು ಖಂಡಿಸಿವೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಅಕ್ಟೋಬರ್ 21 ರಂದು ಅಗರ್ತಲಾದಲ್ಲಿ ಪ್ರಾರಂಭವಾಗಬೇಕಿದ್ದ ಬಾಂಗ್ಲಾ ಸರ್ಕಾರದ ಚಲನಚಿತ್ರೋತ್ಸವವನ್ನು ಮುಂದೂಡಲಾಗಿದೆ.