ರಾಂಚಿ: ಮೋದಿ ಎಂಬ ಹೆಸರಿರುವವರೆಲ್ಲ ಕಳ್ಳರು ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ವಿರುದ್ದ ಹೂಡಲಾದ ಮಾನಹಾನಿ ಮೊಕದ್ದಮೆಯ ವಿಚಾರಣೆ ಜೂನ್ 27 ರಂದು ನಡೆಯಲಿದೆ. ಮುಂದಿನ ವಿಚಾರಣೆಯವರೆಗೂ ರಾಹುಲ್ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳದಂತೆ ಈ ಹಿಂದೆ ನೀಡಲಾಗಿದ್ದ ಆದೇಶವನ್ನು ಜಾರ್ಖಂಡ್ ಹೈಕೋರ್ಟ್ ಮುಂದುವರಿಸಿದೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮೋದಿ ಎಂಬ ಹೆಸರಿರುವವರ ಬಗ್ಗೆ ಅವಹೇಳನ ಮಾಡಿದ್ದರು. ಮೋದಿ ಎಂಬ ಹೆಸರಿರುವವರೆಲ್ಲ ಕಳ್ಳರು ಎಂದಿದ್ದರು. ಇದರಿಂದ ಅಪಮಾನಕ್ಕೊಳಗಾದ ರಾಂಚಿಯ ಪ್ರದೀಪ ಮೋದಿ ಎಂಬುವರು ರಾಂಚಿಯ ಸಿವಿಲ್ ಕೋರ್ಟಿನಲ್ಲಿ ರಾಹುಲ್ ವಿರುದ್ಧ ದಾವೆ ಹೂಡಿದ್ದರು. ಇದೇ ಅರ್ಜಿಯ ವಿಚಾರಣೆ ಈಗ ಜಾರ್ಖಂಡ್ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ಇದಕ್ಕೂ ಮುನ್ನ ಅರ್ಜಿಯ ವಿಚಾರಣೆ ನಡೆಸಿದ್ದ ರಾಂಚಿ ಸಿವಿಲ್ ಕೋರ್ಟ್, ರಾಹುಲ್ ಗಾಂಧಿ ಅಥವಾ ಅವರ ಪ್ರತಿನಿಧಿಯು ವಿಚಾರಣೆಗೆ ಹಾಜರಾಗುವಂತೆ ಆದೇಶ ನೀಡಿತ್ತು. ಆದರೆ ಸದ್ಯ ರಾಹುಲ್ ಗಾಂಧಿಯವರಿಗೆ ವಿಚಾರಣೆಗೆ ಹಾಜರಾಗಲು ಜೂನ್ 27 ರವರೆಗೂ ಜಾರ್ಖಂಡ್ ಹೈಕೋರ್ಟ್ ಕಾಲಾವಕಾಶ ನೀಡಿದೆ.
ಅರ್ಜಿದಾರ ಪ್ರದೀಪ ಮೋದಿ ಇವರು ರಾಹುಲ್ ಗಾಂಧಿ ವಿರುದ್ಧ 20 ಕೋಟಿ ರೂಪಾಯಿ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.