ಮುಂಬೈ: ಕೊರೊನಾ ಸೋಂಕಿನಿಂದ ಮೃತಪಟ್ಟ ರಿಲಯನ್ಸ್ ಕಂಪನಿ ಉದ್ಯೋಗಿಗಳ ಕುಟುಂಬಕ್ಕೆ ಐದು ವರ್ಷಗಳ ಕಾಲ ಸಂಬಳ ವಿತರಣೆ ಮತ್ತು ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಜವಾಬ್ದಾರಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ (Reliance Industries -RIL) ತೆಗೆದುಕೊಂಡಿದೆ. ನೀತು ಅಂಬಾನಿ ಮತ್ತು ಮುಕೇಶ್ ಅಂಬಾನಿ ದಂಪತಿ ಈ ನಿರ್ಣಯ ತೆಗೆದುಕೊಂಡಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಉದ್ಯೋಗಿಗಳ ಕುಟುಂಬಗಳಿಗೆ ದೃಢವಾದ ಆಸರೆಯಾಗಿ ನಿಂತಿದೆ. ಕೊರೊನಾದಿಂದ ಮೃತಪಟ್ಟ ತನ್ನ ಉದ್ಯೋಗಿಗಳ ಕುಟುಂಬದವರಿಗೆ ಎಲ್ಲ ರೀತಿಯ ಆರ್ಥಿಕ ಸಹಾಯ ನೀಡಲು ಮುಂದಾಗಿದೆ. ಉದ್ಯೋಗಿಗಳು ತಮ್ಮ ಕೊನೆಯ ಸಂಬಳ ಎಷ್ಟು ಪಡೆಯುತ್ತಿದ್ದರೋ ಅದೇ ಸಂಬಳವನ್ನು ಮುಂದಿನ 5 ವರ್ಷಗಳ ಕಾಲ ಅವರ ಕುಟುಂಬಸ್ಥರಿಗೆ ನೀಡಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ ಮೃತ ಉದ್ಯೋಗಿಯ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಹಾಲಿ ಉದ್ಯೋಗಿಗಳ ಪೈಕಿ ಯಾರಿಗಾದರೂ ಕೊರೊನಾ ಸೋಂಕು ತಗುಲಿದರೆ ಅವರ ಚಿಕಿತ್ಸೆಗೆ ಅನುಕೂಲವಾಗಲು ರಜೆ ಸೇರಿದಂತೆ ಅದರ ಖರ್ಚು ವೆಚ್ಚವನ್ನೂ ಭರಿಸುವ ಭರವಸೆ ನೀಡಿದೆ. ಒಂದು ವೇಳೆ, ಉದ್ಯೋಗಿ ಕೊರೊನಾದಿಂದ ಮೃತಪಟ್ಟರೆ ಅವರ ಕುಟುಂಬದವರಿಗೆ ತಕ್ಷಣಕ್ಕೆ 10 ಲಕ್ಷ ರೂ. ನಗದು ನೀಡುವುದರ ಜೊತೆಗೆ ಎಲ್ಲ ರೀತಿಯ ನೆರವನ್ನೂ ನೀಡುವುದಾಗಿ ಕಂಪನಿ ಘೋಷಿಸಿದೆ.