ನವದೆಹಲಿ : ಇತರ ಕೆಲ ದೇಶಗಳಂತೆ ಭಾರತವು ತನ್ನ ದಾಸ್ತಾನು, ಸಂಗ್ರಹಾಗಾರ ಅಥವಾ ಶೇಖರಣಾ ಕೇಂದ್ರಗಳಿಂದ 5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಬಿಡುಗಡೆ ಮಾಡುವ ನಿರ್ಧಾರವು ಇಂಧನ ಬೆಲೆಯನ್ನು ತಗ್ಗಿಸಲು ಸಾಕಾಗುವುದಿಲ್ಲ ಎಂದು ತಜ್ಞರು, ವಿಶ್ಲೇಷಕರು ಹೇಳಿದ್ದಾರೆ.
ಗಗನಕ್ಕೇರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಇಳಿಸಲು ಅಮೆರಿಕ, ಚೀನಾ, ಜಪಾನ್ ಸೇರಿದಂತೆ ಕೆಲವು ರಾಷ್ಟ್ರಗಳು ತನ್ನ ದಾಸ್ತಾನಿನಿಂದ ಕಚ್ಚಾ ತೈಲವನ್ನು ಬಿಡುಗಡೆ ಮಾಡುತ್ತಿವೆ. ಅಂತೆಯೇ, ಭಾರತವು ತನ್ನ ಪೆಟ್ರೋಲಿಯಂ ನಿಕ್ಷೇಪಗಳಿಂದ 50 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಇದನ್ನೂ ಓದಿ: ಕೆಲ ದಿನಗಳಲ್ಲೇ ಪೆಟ್ರೋಲ್, ಡೀಸೆಲ್ ಮತ್ತಷ್ಟು ಅಗ್ಗ: ಕೇಂದ್ರದ ಮಹತ್ವದ ನಿರ್ಧಾರಕ್ಕೆ ಕಾರಣ ಇಲ್ಲಿದೆ!
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 82 ಡಾಲರ್ ಇದೆ. ದಾಸ್ತಾನಿನಿಂದ ಕಚ್ಚಾ ತೈಲ ಬಿಡುಗಡೆ ಮಾಡುವ ನಿರ್ಧಾರದ ಬಳಿಕ ಕೇವಲ 8 ರಿಂದ 9 ಡಾಲರ್ ಕಡಿಮೆಯಾಗಿದೆ.
ಹೀಗಾಗಿ, ಈ ಪ್ರಮಾಣವು ಇಂಧನ ದರ ಕಡಿಮೆ ಮಾಡುವ ಉದ್ದೇಶವನ್ನು ಸಂಪೂರ್ಣ ಪೂರೈಸುವುದಿಲ್ಲ ಎಂಬುದು ರಿಲಯನ್ಸ್ ಕ್ಯಾಪಿಟಲ್‌ನ ವಿಶ್ಲೇಷಕ ಶ್ರೀರಾಮ್ ಅಯ್ಯರ್ ಅವರ ಅಭಿಪ್ರಾಯವಾಗಿದೆ.
ಶೇಖರಣಾ ಕೇಂದ್ರಗಳು ಸಾಮಾನ್ಯವಾಗಿ ಭೂಗತ ಮಳಿಗೆಗಳಾಗಿವೆ. ಯಾವುದೇ ತುರ್ತು ಅಥವಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬಳಸಲು ತೈಲವನ್ನ ಸಂಗ್ರಹಿಸಿಟ್ಟಿರಲಾಗುತ್ತದೆ. ಹೀಗಿರುವಾಗ ಕೇವಲ ಇಂಧನ ಬೆಲೆ ಇಳಿಕೆ ಮಾಡಲೆಂದು ಇದೀಗ ದಾಸ್ತಾನಿಗೆ ಕೈ ಹಾಕಿದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಮಸ್ಯೆಗಳನ್ನ ಎದುರಿಸಬೇಕಾಗಬಹುದು.