ನವದೆಹಲಿ: ಅಗ್ನಿಪಥ್ ಯೋಜನೆಯಿಂದ ಸೇನಾ ನೇಮಕಾತಿ ಮತ್ತು ರೆಜಿಮೆಂಟ್ ವ್ಯವಸ್ಥೆ ಬದಲಾಗುತ್ತದೆ ಎಂಬ ಶಂಕೆಗೆ ಸಶಸ್ತ್ರ ಪಡೆಗಳ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಈ ಹಿಂದಿನಂತೆಯೇ ಸೇನಾ ನೇಮಕಾತಿ ನಡೆಯಲಿದೆ. ದೇಶವನ್ನು ಕಾಯುವ ರೆಜಿಮೆಂಟ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ನೇಮಕಾತಿ ಪ್ರಕ್ರಿಯೆಯ ಬಗೆಗಿನ ಅನುಮಾನಗಳ ಬಗ್ಗೆ ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಸ್ಪಷ್ಟನೆ ನೀಡಿದ್ದು, ನೇಮಕಾತಿ ಪ್ರಕ್ರಿಯೆಯು ಬದಲಾಗುವುದಿಲ್ಲ. ಮಿಲಿಟರಿಯಲ್ಲಿನ ಸಾಂಪ್ರದಾಯಿಕ ರೆಜಿಮೆಂಟೇಶನ್ ವ್ಯವಸ್ಥೆಯು ಮುಂದುವರಿಯುತ್ತದೆ ಎಂದು ಮಾಹಿತಿ ನೀಡಿದರು.
ಅಗ್ನಿಪಥ್ ಯೋಜನೆಯು ಸಶಸ್ತ್ರಪಡೆಗಳು ಮತ್ತು ರಕ್ಷಣಾ ಸಚಿವಾಲಯದ ದೀರ್ಘಾವಧಿಯ ಸಮಾಲೋಚನೆಯ ಫಲಿತಾಂಶವಾಗಿದೆ. ಅಗ್ನಿವೀರರಿಗೆ 4 ವರ್ಷಗಳ ಅವಧಿಯನ್ನು ಕಲ್ಪಿಸುವ ಈ ಯೋಜನೆಯು ಸೇನೆಯಲ್ಲಿ ಅತ್ಯಂತ ಸುಧಾರಣಾ ಕ್ರಮವಾಗಿದೆ ಎಂದು ಅವರು ತಿಳಿಸಿದರು.
1989 ರಿಂದ ವಿವಿಧ ಸಮಿತಿಗಳು ಈ ಕುರಿತು ಶಿಫಾರಸ್ಸುಗಳನ್ನು ಮಾಡಿದ್ದು, ಅಗ್ನಿಪಥ್ ಯೋಜನೆಯನ್ನು ಅಂತಿಮಗೊಳಿಸುವಲ್ಲಿ ಸಮಿತಿಗಳು ನಿರ್ಣಾಯಕ ಪಾತ್ರ ವಹಿಸಿವೆ ಎಂದರು.
ಪೋಷಕರ ಒಪ್ಪಿಗೆ ಬೇಕು: ರಕ್ಷಣಾ ಸಚಿವಾಲಯದ ಈ ಯೋಜನೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಯಾವುದೇ ಯುವಕರಿಗೆ ಸೇನೆಯಲ್ಲಿ ಅವಕಾಶವಿಲ್ಲ. ತಾವು ಅಗ್ನಿವೀರ್ಗೆ ಅರ್ಜಿ ಸಲ್ಲಿಸಿದಾಗ ತಾವು ಹಿಂಸಾಚಾರದಲ್ಲಿ ಭಾಗವಹಿಸಿಲ್ಲ ಎಂಬ ಬಗ್ಗೆ ಮಾಹಿತಿ ನೀಡಬೇಕು. ಅಲ್ಲದೇ, ಅಗ್ನಿವೀರ್ ಆಗಿ ಸೇನೆ ಸೇರಲು ತಮ್ಮ ಪೋಷಕರ ಬಳಿಕ ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಅವರು ವಿವರಿಸಿದರು.
ಸಶಸ್ತ್ರ ಪಡೆಗಳಿಗೆ ಸೇರುವ ಅಗ್ನಿವೀರರು ಹಿಂಸಾಚಾರ, ದೊಂಬಿಯಲ್ಲಿ ತೊಡಗಿರಬಾರದು. ಈ ಬಗ್ಗೆ ಪೊಲೀಸ್ ತನಿಖೆಯಲ್ಲಿ ಕಂಡು ಬಂದಲ್ಲಿ ಅಂಥವರನ್ನು ಸೇನೆಯಿಂದ ಕೈಬಿಡಲಾಗುತ್ತದೆ. ಪೊಲೀಸ್ ತನಿಖೆ ಸೇನಾ ನೇಮಕಾತಿಯ ಭಾಗಿವಾಗಿರಲಿದೆ ಎಂದು ತಿಳಿಸಿದರು.
ಶೌರ್ಯ ಪ್ರಶಸ್ತಿಗೂ ಅರ್ಹತೆ: ಈ ಯೋಜನೆಯಡಿ ನೇಮಕಗೊಂಡ 'ಅಗ್ನಿವೀರರು' ಶೌರ್ಯ ಪ್ರಶಸ್ತಿಗಳಿಗೂ ಅರ್ಹತೆ ಪಡೆಯಲಿದ್ದಾರೆ. ಸಶಸ್ತ್ರ ಪಡೆಗಳು ಅತ್ಯುತ್ತಮ ಪ್ರತಿಭೆಗಳನ್ನು ಹೆಕ್ಕಿ ತೆಗೆಯಲು ಈ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ಮೂರು ಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಗ್ನಿಪಥ್ ಯೋಜನೆ ಹಿಂಪಡೆವ ಮಾತೇ ಇಲ್ಲ, ಇದು ದಶಕಗಳ ಚಿಂತನೆಯ ಫಲ: ಅಜಿತ್ ದೋವಲ್