ತಮಿಳುನಾಡು: ಚೆನ್ನೈ ದಾಖಲೆ ಮಳೆಗೆ ಸಾಕ್ಷಿಯಾಗಿದೆ. ಕಳೆದ 72 ವರ್ಷಗಳಲ್ಲಿ ಮೂರನೇ ದಾಖಲೆಯ ಮಳೆ ಇದಾಗಿದ್ದು, 1964 ಮತ್ತು 1990ರಲ್ಲಿ ಸುರಿದ ನಂತರ ನವೆಂಬರ್ ಒಂದರಂದು ಧಾರಾಕಾರವಾಗಿ ಸುರಿದಿದೆ. ನುಂಗಂಬಾಕ್ಕಂ 8, ರೆಡ್ ಹಿಲ್ಸ್ 13 ಮತ್ತು ಪೆರಂಬೂರ್‌ನಲ್ಲಿ 12 ಸೆಂ.ಮೀ ಮಳೆಯಾಗಿದೆ.
ಅಕ್ಟೋಬರ್ 29 ರಂದು ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಮಳೆ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಮುಂಗಾರು ಪೂರ್ವ ಸಿದ್ಧತೆ ಕುರಿತು ಉನ್ನತ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದರು.
ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್‌ಪೇಟೆ ಸೇರಿದಂತೆ ಕನಿಷ್ಠ 8 ಜಿಲ್ಲೆಗಳಲ್ಲಿ ಮಳೆಯ ಕಾರಣ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ರಾತ್ರಿ ಸುರಿದ ಮಳೆಗೆ ಇಬ್ಬರು ಮೃತ ಪಟ್ಟಿದ್ದಾರೆ. ವಿದ್ಯುತ್ ಸ್ಪರ್ಶ ಮತ್ತು ಮನೆಗೋಡೆ ಕುಸಿದು ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 1 ರಿಂದ ನವೆಂಬರ್ 1 ರವರೆಗೆ ಚೆನ್ನೈ ಜಿಲ್ಲೆಯಲ್ಲಿ 20 ಸೆಂ.ಮೀ ಮಳೆಯಾಗಿದೆ. ವಾಡಿಕೆಗೆ ಹೋಲಿಸಿದರೆ 29 ಶೇಕಡಾದಷ್ಟು ಕಡಿಮೆ ಮಳೆಯಾಗಿದೆ ಎನ್ನಲಾಗ್ತಿದೆ. ಮುಂದಿನ 3 ದಿನಗಳವರೆಗೆ, ತಮಿಳುನಾಡು ಪುದುಚೇರಿ-ಕಾರೈಕಲ್‌ನ ಹೆಚ್ಚಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ, ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲ್‌ಪೇಟ್ ಮತ್ತು ವೆಲ್ಲೂರ್ ಸೇರಿದಂತೆ ಉತ್ತರದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವರುಣನ ಆರ್ಭಟ ಮುಂದುವರಿಯುವ ಸಾಧ್ಯತೆಯಿದೆ.
ಕಾವೇರಿ ನದಿ ಮುಖಜ ಭೂಮಿ, ರಾಮನಾಥಪುರ ಮತ್ತು ಶಿವಗಂಗೆ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಒಂದೆರಡು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಇದನ್ನೂ ಓದಿ : ಗುಜರಾತ್ ತೂಗು ಸೇತುವೆ ದುರಂತ: ಮುಂದುವರೆದ ರಕ್ಷಣಾ ಕಾರ್ಯಾಚರಣೆ