ನವದೆಹಲಿ: ಈ ಬಾರಿಯ ದೀಪಾವಳಿಯು ಚಿಲ್ಲರೆ ಮಾರುಕಟ್ಟೆಗಳಲ್ಲಿ ನಿಜಕ್ಕೂ ಬೆಳಕು ಚೆಲ್ಲಿದೆ. ಈ ದೀಪಾವಳಿ ಹಬ್ಬದ ಹಿನ್ನೆಲೆ ಭಾರತದಾದ್ಯಂತ ಚಿಲ್ಲರೆ ಮಾರುಕಟ್ಟೆಗಳು ಇಲ್ಲಿಯವರೆಗೆ 3.75 ಲಕ್ಷ ಕೋಟಿ ರೂ.ಗಳ ದಾಖಲೆಯ ವ್ಯಾಪಾರ ಮಾಡಿವೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ.
''ಗೋವರ್ಧನ ಪೂಜೆ, ಭಯ್ಯಾ ದೂಜ್, ಛತ್ ಪೂಜಾ ಮತ್ತು ತುಳಸಿ ವಿವಾಹದಂತಹ ಹಬ್ಬಗಳು ಇನ್ನೂ ನಡೆಯಬೇಕಿದೆ. ಈಗಾಗಲೇ 3.75 ಲಕ್ಷ ಕೋಟಿ ರೂ.ಗೆ ತಲುಪಿರುವ ವಹಿವಾಟು, ಬರುವ ಹಬ್ಬಕ್ಕೆ 50,000 ಕೋಟಿ ಮೌಲ್ಯದ ಹೆಚ್ಚುವರಿ ವಹಿವಾಟು ಮಾಡಬಲ್ಲದು ಎಂದು ಅಂದಾಜು ಮಾಡಲಾಗಿದೆ. ಈ ದೀಪಾವಳಿಯಲ್ಲಿ ಬಹುತೇಕ ಭಾರತೀಯ ಉತ್ಪನ್ನಗಳು ಮಾರಾಟ ಆಗಿರುವುದು ಮತ್ತೊಂದು ಗಮನಾರ್ಹದ ವಿಷಯವಾಗಿದೆ'' ಎಂದು ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿಸಿ ಭಾರ್ಟಿಯಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರು ಸೋಮವಾರ ವಹಿವಾಟಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
''ಈ ಬಾರಿಯ ದೀಪಾವಳಿ ಹಬ್ಬದಂದು ನೆರೆ ದೇಶ ಚೀನಾ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಅನುಭವಿಸಿದೆ. ಪ್ರತಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚೀನಾದಲ್ಲಿ ತಯಾರಾದ ಶೇ.70ರಷ್ಟು ಸರಕುಗಳನ್ನು ಭಾರತೀಯ ವ್ಯಾಪಾರಸ್ಥರು ಖರೀದಿ ಮಾಡುತ್ತಿದ್ದರು. ಆದರೆ, ಈ ಬಾರಿ ಚೀನಾ ವಹಿವಾಟು ಕುಸಿತ ಕಂಡಿದೆ. ಈ ವರ್ಷ ದೇಶದ ಯಾವುದೇ ಉದ್ಯಮಿಯು ಚೀನಾದಿಂದ ದೀಪಾವಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಆಮದು ಮಾಡಿಕೊಂಡಿಲ್ಲ. ದೀಪಾವಳಿ ನಿಮಿತ್ತ ಒಕ್ಕೂಟವು ದೇಶಾದ್ಯಂತ "ಭಾರತೀಯ ಉತ್ಪನ್ನ-ಸಬ್ಕಾ ಉಸ್ತಾದ್" ಎಂಬ ಅಭಿಯಾನವನ್ನು ಪ್ರಾರಂಭಿಸಿತ್ತು. ಈ ಅಭಿಯಾನ ಯಶಸ್ವಿಯಾಗಿದೆ. ಗ್ರಾಹಕರಿಂದ ಉತ್ತಮ ಬೆಂಬಲ ಸಿಕ್ಕಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಸ್ಥಳೀಯ ಮತ್ತು ಸ್ವಾವಲಂಬಿ ಭಾರತ ಅಭಿಯಾನದ ಪರಿಣಾಮ'' ಎಂದು ಅವರು ಖುಷಿ ಹೊರಹಾಕಿದ್ದಾರೆ.
ದೀಪಾವಳಿಯಂದು ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಖರೀದಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಪರಿಣಾಮ ದೇಶದ ತುಂಬೆಲ್ಲ ಸ್ಥಳೀಯ ತಯಾರಕರು, ಕುಶಲಕರ್ಮಿಗಳು ಮತ್ತು ಕಲಾವಿದರು ತಯಾರಿಸಿದ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದವು. ಪರಿಣಾಮ ಚಿಲ್ಲರೆ ಮಾರುಕಟ್ಟೆಗಳು 3.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಹಿವಾಟು ಮಾಡಿವೆ. ಯಾವ ಯಾವ ವಲಯದಲ್ಲಿ ಶೇಕಡಾ ಎಷ್ಟು ಪ್ರಮಾಣದ ವಹಿವಾಟು ಆಗಿದೆ ಅನ್ನೋದರ ಮಾಹಿತಿ ಇಲ್ಲಿದೆ.
- 13% ಆಹಾರ ಮತ್ತು ದಿನಸಿ
- 9% ಆಭರಣ
- 12% ಜವಳಿ ಮತ್ತು ಉಡುಪು
- 4% ಒಣ ಹಣ್ಣುಗಳು, ಸಾಮಾನ್ಯ ಮತ್ತು ಸಿಹಿತಿಂಡಿಗಳು
- 3% ಮನೆ ಅಲಂಕಾರ
- 6% ಸೌಂದರ್ಯವರ್ಧಕಗಳು
- 8% ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್
- 3% ಪೂಜಾ ಸಾಮಗ್ರಿಗಳು ಮತ್ತು ಪೂಜಾ ವಸ್ತುಗಳು
- 3% ಪಾತ್ರೆಗಳು ಮತ್ತು ಅಡಿಗೆ ಉಪಕರಣಗಳು
- 2% ಮಿಠಾಯಿ ಮತ್ತು ಬೇಕರಿ
- 8% ಉಡುಗೊರೆ ವಸ್ತುಗಳು
- 4% ಫರ್ನಿಶಿಂಗ್ ಮತ್ತು ಪೀಠೋಪಕರಣಗಳು
- 20% ಇತರ
ಇದನ್ನೂ ಓದಿ: ದೇಶದ ಪಟಾಕಿ ಕೇಂದ್ರ 'ಶಿವಕಾಶಿ'ಗೆ 50 ಕೋಟಿ ರೂಪಾಯಿ ವ್ಯವಹಾರ ನಷ್ಟ: ವರದಿ