ಮಲಪ್ಪುರಂ(ಕೇರಳ): ಕೇರಳದ ಮಲಪ್ಪುರಂನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೋಸ್ಕರ 100 ವರ್ಷಗಳ ಹಳೆಯದಾದ ಮರ ಕಡಿದು ಹಾಕಲಾಗಿದೆ. ಈ ವೇಳೆ ಮರದಲ್ಲಿ ವಾಸವಾಗಿದ್ದ ಅನೇಕ ಪಕ್ಷಿಗಳು ಹಾಗೂ ಅವುಗಳ ಮೊಟ್ಟೆ ನಾಶವಾಗಿವೆ. ಇದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ)ಕ್ಕೆ ದೂರು ಸಲ್ಲಿಸಿದ್ದು, ವರದಿ ಸಲ್ಲಿಸುವಂತೆ ತಿಳಿಸಿದೆ.
ರಸ್ತೆಗೋಸ್ಕರ NHAI ಅಜಾಗರೂಕತೆಯಿಂದ ಮರ ಕಡಿದಿರುವುದರಿಂದ ಅಪಾರ ಸಂಖ್ಯೆಯ ಪಕ್ಷಿಗಳು ಸಾವನ್ನಪ್ಪಿವೆ. ಅದರ ವಿಡಿಯೋ ಸಹ ವೈರಲ್ ಆಗಿದೆ. ಕೇರಳದ ರಂದಥಣಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆಗಸ್ಟ್ ಮೊದಲ ವಾರದಲ್ಲಿ ನಡೆದ ಘಟನೆ ಇದಾಗಿದೆ ಎನ್ನಲಾಗ್ತಿದೆ. ಜೆಸಿಬಿ ಮೂಲಕ ಬೃಹತ್ ಮರವನ್ನು ಏಕಾಏಕಿ ಧರೆಗುರುಳಿಸಲಾಗಿದ್ದು, ಈ ವೇಳೆ ಅನೇಕ ಪಕ್ಷಗಳು ನೆಲಕ್ಕೆ ಬಿದ್ದು ಸಾವನ್ನಪ್ಪಿವೆ. ಹೀಗಾಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವರದಿ ಕೇಳಲಾಗಿದೆ.
ರಸ್ತೆ ಕಾಮಗಾರಿ ವಹಿಸಿಕೊಟ್ಟಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಸಚಿವರಾದ ಮೊಹಮ್ಮದ್ ರಿಯಾಸ್ ಆಗ್ರಹಿಸಿದ್ದಾರೆ. ಜೊತೆಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೂ ದೂರು ನೀಡಲಾಗಿದೆ. ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿರುವ ಗಡ್ಕರಿ ಅವರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
ಇದನ್ನೂ ಓದಿ: Ramanagar: ಮರಳೇಬೇಕುಪ್ಪೆ ಕೆರೆಗೆ ವಿದೇಶಿ ಪಕ್ಷಿಗಳ ಆಗಮನ... ಹಕ್ಕಿಗಳ ನಿನಾದ
ಕಳೆದ ಆಗಸ್ಟ್ ತಿಂಗಳಲ್ಲಿ ಕೇರಳದ ಮಲಪ್ಪುರಂನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ವೇಳೆ ರಂದಧಣಿ ಪ್ರದೇಶದಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ ಬೃಹತ್ ಮರವನ್ನು ರಸ್ತೆ ಕಾಮಗಾರಿಗೆ ಅಡ್ಡಿ ಬಂದಿದೆ. ಹೀಗಾಗಿ, ಹಿಂದೆ ಮುಂದೆ ವಿಚಾರ ಮಾಡದೇ ಮರ ಕಡಿದು ಹಾಕಲಾಗಿದೆ. ಹೀಗಾಗಿ, ಮರದಲ್ಲಿ ಗೂಡು ಕಟ್ಟಿದ ಸಾವಿರಾರು ಪಕ್ಷಿಗಳು ವಿಚಲಿತಗೊಂಡಿದ್ದು, ಒಮ್ಮೆಲೆ ಗಾಳಿಗೆ ಹಾರಿವೆ. ಆದರೆ, ಕೆಲವೊಂದು ಪಕ್ಷಿಗಳು ತಮ್ಮ ಪ್ರಾಣ ಕಳೆದುಕೊಂಡಿವೆ. ಸಣ್ಣ ಮರಿಗಳು, ಮೊಟ್ಟೆ ನಾಶವಾಗಿವೆ. ಈ ಘಟನೆಯ ವಿಡಿಯೋ ತುಣುಕವೊಂದನ್ನು ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಮನೆ ಬೇಕು. ಮನುಷ್ಯ ಇದಕ್ಕಿಂತ ಕೆಟ್ಟವನಾಗಲು ಸಾಧ್ಯವೇ? ಎಂದು ಪ್ರವೀಣ್ ಬರೆದುಕೊಂಡಿದ್ದಾರೆ.