ಗುವಾಹಟಿ (ಅಸ್ಸೋಂ): ಮಹಾರಾಷ್ಟ್ರ ಮಹಾವಿಕಾಸ್ ಆಘಾಡಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಿವಸೇನೆಯ ಹಿರಿಯ ನಾಯಕ ಏಕನಾಥ ಶಿಂಧೆ ತಮ್ಮೊಂದಿಗೆ 40 ಶಾಸಕರಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವ ತತ್ವಕ್ಕಾಗಿ ನಾವು ಬದ್ಧ ಎಂದು ಪುನರುಚ್ಛರಿಸಿದ್ದಾರೆ.
ಶಿವಸೇನೆಯ ಮುಖ್ಯಸ್ಥ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿರುವ ಏಕನಾಥ ಏಕಾಏಕಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಸೋಮವಾರ ಸಂಜೆ ಶಾಸಕರನ್ನು ಕಟ್ಟಿಕೊಂಡು ಅವರು ಬಿಜೆಪಿ ಆಡಳಿತವಿರುವ ಗುಜರಾತ್ಗೆ ತೆರಳಿದ್ದರು. ಆದರೆ, ಬುಧವಾರ ಬೆಳಗ್ಗೆಯ ವೇಳೆಗೆ ತಮ್ಮ ಮೊಕ್ಕಾಂ ಬದಲಿಸಿ, ಅಸ್ಸೋಂನ ಗುವಾಹಟಿಗೆ ಬಂದಿದ್ಧಾರೆ.
ಗುವಾಹಟಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿಂಧೆ, "ನನ್ನೊಂದಿಗೆ 39 ಶಾಸಕರಿದ್ದಾರೆ. ನಾವೆಲ್ಲರೂ ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವ ತತ್ವಕ್ಕೆ ಬದ್ಧ ಮತ್ತು ಅದನ್ನು ಮುಂದುವರೆಸಿಕೊಂಡು ಹೋಗುತ್ತೇವೆ" ಎಂದು ಹೇಳಿದರು. ಆದರೆ, ತಮ್ಮ ಮುಂದಿನ ನಡೆಯೇನು ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ. ಅಲ್ಲದೇ, ಬಿಜೆಪಿ ಆಡಳಿತವಿರುವ ಅಸ್ಸೋಂ ಯಾಕೆ ಬಂದಿದ್ದೀರಾ ಎಂಬ ಪ್ರಶ್ನೆಗೆ ಇದೊಂದು ಉತ್ತಮವಾದ ಸ್ಥಳ ಎಂದಷ್ಟೇ ಹೇಳಿ ಏಕನಾಥ್ ಜಾರಿಕೊಂಡರು.
ಏಕನಾಥ್ ಶಿಂಧೆ ಅವರೊಂದಿಗೆ 32 ಶಿವಸೇನೆ ಶಾಸಕರು ಹಾಗೂ ಪಕ್ಷೇತರ ಹಾಗೂ ಇತರ ಸಣ್ಣ ಪಕ್ಷಗಳ ಶಾಸಕರ ಸೇರಿ 7 ಜನ ಶಾಸಕರಿದ್ದು, ತಮ್ಮ ಬೆಂಬಲದ ಬಗ್ಗೆ ಪತ್ರಕ್ಕೆ ಸಹಿ ಮಾಡಿಕೊಟ್ಟಿದ್ದಾರೆ. ಇದರಿಂದ ಮಹಾರಾಷ್ಟ್ರದ ಸರ್ಕಾರ ಅಲುಗಾಡಲು ಶುರುವಾಗಿದೆ. ಆದರೆ, ಈ ನಡುವೆ ಶಾಸಕರ ಫೋಟೋವೊಂದು ಬಹಿರಂಗವಾಗಿದ್ದು, ಅದರಲ್ಲಿ 34 ಜನ ಕಾಣಿಸಿಕೊಂಡಿದ್ದಾರೆ.
ಇತ್ತ, ಗುವಾಹಟಿಗೆ ಬಂದಿಳಿದ ಭಿನ್ನಮತೀಯ ಶಾಸಕರನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಅಸ್ಸೋಂನ ಬಿಜೆಪಿ ಸಂಸದ ಪಲ್ಲಬ್ ಲೋಚನ್ ದಾಸ್ ಮತ್ತು ಶಾಸಕ ಸುಶಾಂತ ಬೊರ್ಗೊಹೈನ್ ಬರಮಾಡಿಕೊಂಡಿದ್ದರು. ಬಳಿಕ ಪಿಎಸ್ಐ ಅಧಿಕಾರಿಯ ನೇತೃತ್ವದಲ್ಲಿ ಪೊಲೀಸ್ ಬೆಂಗಾವಲು ಹೊಂದಿರುವ ಸರ್ಕಾರಿ ಸ್ವಾಮ್ಯದ ಲಕ್ಸುರಿ ಬಸ್ಗಳಲ್ಲಿ ಹೋಟೆಲ್ಗೆ ಕರೆದುಕೊಂಡು ಹೋಗಲಾಗಿದೆ.
ಇದನ್ನೂ ಓದಿ: 'ಏಕನಾಥ ಬಂಡಾಯ ಗುಂಪಿನಿಂದ ಅಪಹರಣ': ಮುಂಬೈಗೆ ಮರಳಿದ 'ಶಿವಸೈನಿಕರು' ಹೇಳಿದ್ದು ರೋಚಕ ಕಥೆ!