ನಿಜಾಮಾಬಾದ್(ತೆಲಂಗಾಣ) : ನಗರದ ಹೋಟೆಲ್‌ವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಿಲಾಬಾದ್ ಮೂಲದ ಕೊತಕೋಟಾ ಸೂರ್ಯಪ್ರಕಾಶ್, ಅವರ ಪತ್ನಿ ಪ್ರತ್ಯೂಷಾ ಹಾಗೂ ಇಬ್ಬರು ಮಕ್ಕಳು ಮೃತರು.
ಸೂರ್ಯಪ್ರಕಾಶ್ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಆತ್ಮಹತ್ಯೆ ಮಾಡಿಕೊಂಡ ಹೋಟೆಲ್ನ ರೂಮ್ನಲ್ಲಿ ಡೆತ್ನೋಟ್ ಸಿಕ್ಕಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.
ಆದಿಲಾಬಾದ್ನ ಸೂರ್ಯ ಪ್ರಕಾಶ್ ಹಲವು ವರ್ಷಗಳಿಂದ ಹೈದರಾಬಾದ್ನಲ್ಲಿ ನೆಲೆಸಿದ್ದರು. 15 ದಿನಗಳ ಹಿಂದೆ ನಿಜಾಮಾಬಾದ್‌ಗೆ ಬಂದಿದ್ದ ಅವರು ಖಾಸಗಿ ಹೋಟೆಲ್‌ನಲ್ಲಿ ಕುಟುಂಬ ಸಮೇತ ತಂಗಿದ್ದರು. ಹೆಂಡತಿ ಮಕ್ಕಳಿಗೆ ಕ್ರಿಮಿನಾಶಕ ಕುಡಿಸಿ ನಂತರ ಸೂರ್ಯ ಪ್ರಕಾಶ್ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಡೆತ್ನೋಟ್ ಮತ್ತು ಸಂಬಂಧಿಕರ ದೂರು ಆಧರಿಸಿ ತನಿಖೆ ನಡೆಸಲಾಗುವುದು ಎಂದು ಎಸಿಪಿ ವೆಂಕಟೇಶ್ವರ್ ತಿಳಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ನಿನ್ನೆ ರಾತ್ರಿ ಹೋಟೆಲ್ ಒಂದರಲ್ಲಿ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೂರ್ಯಪ್ರಕಾಶ್ ಅವರು ಬರೆದಿರುವ ಡೆತ್ನೋಟ್ ಸಿಕ್ಕಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರರು ಮತ್ತು ಲೇವಾದೇವಿದಾರರ ಕಿರುಕುಳಕ್ಕೆ ಕೆಲವು ಆಸ್ತಿಗಳನ್ನು ಬರೆದುಕೊಟ್ಟಿದ್ದರು. ಆದರೂ ಕಿರುಕುಳ ನಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ನೋಟ್ನಲ್ಲಿ ಬರೆದಿದ್ದಾರೆ. ಇದನ್ನು ಆಧರಿಸಿ ತನಿಖೆ ನಡೆಸುತ್ತೇವೆ. - ನಿಜಾಮಾಬಾದ್ ಎಸಿಪಿ ವೆಂಕಟೇಶ್ವರ್