ನವದೆಹಲಿ: ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆ ರಂಜನ್ ಚೌಧರಿ ಮತ್ತು ಗೌರವ್ ಗೊಗೊಯ್ ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿದ್ದು, ಈ ಹಿನ್ನೆಲೆ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಕಾಂಗ್ರೆಸ್ ನಾಯಕ ರವ್ನೀತ್ ಸಿಂಗ್ ಬಿಟ್ಟು ಅವರನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರನ್ನಾಗಿ ನೇಮಿಸಲಾಗಿದೆ.
ಕಾಂಗ್ರೆಸ್ನ ಪಶ್ಚಿಮ ಬಂಗಾಳ ಘಟಕದ ಮುಖ್ಯಸ್ಥರಾದ ರಂಜನ್ ಚೌಧರಿ ಮುಂದಿನ ಎರಡು ತಿಂಗಳು ಚುನಾವಣೆಯಲ್ಲಿ ಸಕ್ರಿಯವಾಗಬೇಕಾಗಿರುವ ಹಿನ್ನೆಲೆಯಲ್ಲಿ ರವ್ನೀತ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಪ್ರಕಟನೆ ಮೂಲಕ ಮಾಹಿತಿ ನೀಡಿರುವ ಚೌಧರಿ, ನಾನು ಮತ್ತು ಉಪನಾಯಕ ಗೌರವ್ ಗೊಗೊಯ್ ಅವರು ಸದನದ ನಡಾವಳಿಯಲ್ಲಿ ಭಾಗವಹಿಸುವುದಿಲ್ಲ. ಈ ಕುರಿತಾದ ಎಲ್ಲ ಕೆಲಸವನ್ನು ಲುಧಿಯಾನಾ ಕಾಂಗ್ರೆಸ್ ಸಂಸದ ರಾವ್ನೀತ್ ಸಿಂಗ್ ಬಿಟ್ಟು ಮತ್ತು ಕೊಡಿಕುನ್ನಿಲ್ ಸುರೇಶ್ ಅವರಿಗೆ ಹಸ್ತಾಂತರಿಸಲಾಗುತ್ತದೆ. ಸರೇಶ್ ಅವರು ಸಂಸದೀಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಅವರು ಸಹ ಅಸ್ಸೋಂನಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವುದರಿಂದ ಸಂಸದ ಬಿಟ್ಟು ಅವರು ಕೆಳಮನೆಯಲ್ಲಿ ಪಕ್ಷದ ಕಾರ್ಯತಂತ್ರದ ಉಸ್ತುವಾರಿ ವಹಿಸಲಿದ್ದಾರೆ. ಮೂರು ಬಾರಿ ಸಂಸದರಾಗಿರುವ ಬಿಟ್ಟು ಅವರು 2009 ರಲ್ಲಿ ಆನಂದಪುರ ಸಾಹಿಬ್ ಮತ್ತು ನಂತರ 2014 ಮತ್ತು 2019 ರಲ್ಲಿ ಲುಧಿಯಾನದಿಂದ ಲೋಕಸಭೆಗೆ ಆಯ್ಕೆಯಾದರು.