ರಾಜ್‌ಕೋಟ್ (ಗುಜರಾತ್): ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಸ್ಟಾರ್ ಕ್ರಿಕೆಟಿಗ ರವೀಂದ್ರ ಜಡೇಜಾ ಮತ್ತು ಅವರ ಪತ್ನಿ, ಬಿಜೆಪಿ ಅಭ್ಯರ್ಥಿಯಾದ ರಿವಾಬಾ ಜಡೇಜಾ ಅವರು ಮತದಾನ ಮಾಡಿದರು. ರಾಜ್ಕೋಟ್ನ ಜಾಮ್‌ನಗರದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ದಂಪತಿ ಬಳಿಕ ಮತದಾನ ಮಾಡಲು ಕೋರಿದರು.
ಜಡೇಜಾ ಮತ್ತು ಅವರ ಪತ್ನಿ ಬಿಜೆಪಿ ಸೇರಿದ್ದು, ರಿವಾಬಾ ಜಡೇಜಾ ಅವರು ಜಾಮ್ನಗರ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಗೂ ಮೊದಲು ಭರ್ಜರಿ ಪ್ರಚಾರ ನಡೆಸಿದ್ದ ಜಡೇಜಾ ದಂಪತಿ ತಮ್ಮನ್ನು ಗೆಲ್ಲಿಸುವಂತೆ ಕೋರಿದ್ದರು.
ಇನ್ನು ಜಡೇಜಾ ಅವರ ತಂದೆ ಮತ್ತು ಅಕ್ಕ ಕಾಂಗ್ರೆಸ್ನಲ್ಲಿದ್ದು, ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾದ ಬಿಪೇಂದ್ರ ಸಿಂಹ ಪರವಾಗಿ ಜಡೇಜಾ ಅವರ ಸಹೋದರಿ ನೈನಾ ಅವರು ಪ್ರಚಾರಕ್ಕೆ ಧುಮುಕಿದ್ದರು. ಅಲ್ಲದೇ ನೈಬನಾ ಅವರಿಗೆ ಪಕ್ಷ ಮುಖ್ಯ ಪ್ರಚಾರಕಿ ಹೊಣೆ ಹೊರೆಸಿತ್ತು.
ಮತದಾನದ ಬಳಿಕ ಮಾತನಾಡಿದ ರವೀಂದ್ರ ಜಡೇಜಾ, ಕೇಸರಿ ಪಕ್ಷವು ದೊಡ್ಡ ಅಂತರದಿಂದ ಗೆಲ್ಲುವ ಭರವಸೆಯಿದೆ. ತಂದೆ ಅನಿರುಧ್‌ಸಿನ್ಹಾ ಮತ್ತು ಸಹೋದರಿ ನೈನಾ ಅವರು ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದು, ಯಾವುದೇ ಪರಿಣಾಮ ಬೀರುವುದಿಲ್ಲ. ಬಿಜೆಪಿ ಅಭ್ಯರ್ಥಿಯಾ ಪತ್ನಿ ರಿವಾಬಾ ಅವರು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕೋರಿದ ಅಭ್ಯರ್ಥಿ ರಿವಾಬಾ ಅವರು, ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಇದು ಜವಾಬ್ದಾರಿಯ ಭಾಗವಾಗಿದೆ. ಬಿಜೆಪಿ ಕಾರ್ಯಕರ್ತರ ಶ್ರಮ ಗುರುವಾರದಂದು ಫಲ ನೀಡಲಿದೆ ಎಂಬ ಭರವಸೆ ಇದೆ ಎಂದರು.
ಕುಟುಂಬ, ರಾಜಕೀಯ ಬೇರೆ ಬೇರೆ: ನೈನಾ ಜಡೇಜಾ- ಇನ್ನು ಕಾಂಗ್ರೆಸ್ ಪರ ಮತ್ತು ತಮ್ಮನ ಪತ್ನಿಯ ವಿರುದ್ಧ ಪ್ರಚಾರ ಮಾಡಿರುವ ನೈನಾ ಜಡೇಜಾ ಅವರು ಮಾತನಾಡಿ, ಕುಟುಂಬವೇ ಬೇರೆ. ರಾಜಕೀಯವೇ ಬೇರೆ. ನನ್ನ ಸಹೋದರನ ಮೇಲಿನ ಪ್ರೀತಿ ಹಾಗೆಯೇ ಇರುತ್ತದೆ. ಆತನ ಪತ್ನಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕುಟುಂಬ ಸದಸ್ಯೆಯಾಗಿ ಬೆಂಬಲಿಸುವೆ. ರಾಜಕೀಯವಾಗಿ ಅವರ ಎದುರಾಳಿಯಾಗಿರುವೆ ಎಂದರು.
ಕುಟುಂಬಗಳು ರಾಜಕೀಯದಲ್ಲಿ ಎದುರಾಗಿದ್ದು ಇದೇ ಮೊದಲಲ್ಲ. ಜಾಮ್‌ನಗರದ ಕ್ಷೇತ್ರದ ಹಲವಾರು ಕುಟುಂಬಗಳು ವಿವಿಧ ಪಕ್ಷಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿದ್ಧಾಂತದ ಕಾರಣಕ್ಕಾಗಿ ನಾವು ಪ್ರತಿಸ್ಪರ್ಧಿಗಳು ಅಷ್ಟೇ. ಯಾರು ಉತ್ತಮರೋ ಅವರು ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದರು.