ಅಗರ್ತಲಾ (ತ್ರಿಪುರ): ತ್ರಿಪುರದ ಉನಕೋಟಿ ಜಿಲ್ಲೆಯಲ್ಲಿ ಬುಧವಾರ ರಥಯಾತ್ರೆ ವೇಳೆ ಭೀಕರ ದುರಂತ ಸಂಭವಿಸಿದೆ. ಇಲ್ಲಿನ ಕುಮಾರ್‌ಘಾಟ್‌ನಲ್ಲಿ ರಥಕ್ಕೆ ಹೈಟೆನ್ಶನ್ ವೈರ್ ತಗುಲಿ ಏಳು ಜನ ಭಕ್ತರು ಸುಟ್ಟು ಕರಕಲಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ರಾಜ್ಯದ ಹಲವೆಡೆ ಬೆಳಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದೆ. ಇದರ ನಡುವೆಯೇ ರಥಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಇಂದು ಸಂಜೆ 4.30ರ ಸುಮಾರಿಗೆ ಭಕ್ತರು ರಥ ಎಳೆಯುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿದೆ. ಪರಿಣಾಮ ಆಳು ಜನರು ಸಾವನ್ನಪ್ಪಿದರು. ಅನೇಕರು ಗಾಯಗೊಂಡಿರು ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಬ್ಬಿಣದಿಂದ ಮಾಡಿದ ರಥ: ಕುಮಾರ್‌ಘಾಟ್ ಪ್ರದೇಶದಲ್ಲಿ ಪ್ರತಿ ವರ್ಷದಂತೆ ಜಗನ್ನಾಥ ರಥಯಾತ್ರೆ ನಡೆಯಿತ್ತು. ಒಂದು ವಾರದ ಉತ್ಸವದ ನಂತರ ಇಂದು ಬಲಭದ್ರ, ದೇವಿ ಸುಭದ್ರಾ ಮತ್ತು ಜಗನ್ನಾಥರ ರಥಗಳು ಮರಳಿ ತೆರಳಿದ್ದರು. ಸಾವಿರಾರು ಭಕ್ತರು ಕಬ್ಬಿಣದಿಂದ ಮಾಡಿದ ರಥವನ್ನು ಎಳೆಯುತ್ತಿದ್ದರು. ಈ ವೇಳೆ 133 ಕೆವಿ ಓವರ್ಹೆಡ್ ಕೇಬಲ್ ರಥಕ್ಕೆ ಸ್ಪರ್ಶಿಸಿ ಈ ದುರಂತ ಸಂಭವಿಸಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ ಜ್ಯೋತಿಷ್ಮನ್ ದಾಸ್ ಚೌಧರಿ ವಿವರಿಸಿದ್ದಾರೆ.
ಮತ್ತೊಂದೆಡೆ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ವಿಷಯ ತಿಳಿದು ಅನೇಕರ ಜನರು ಆಸ್ಪತ್ರೆಯತ್ತ ಕೂಡ ದೌಡಾಯಿಸಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ನಾವು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ರಥಕ್ಕೆ ಹೈವೋಲ್ಟೇಜ್ ತಂತಿಗೆ ಸ್ಪರ್ಶಿಸಿದೆ. ಇದರಿಂದ ಹಲವರು ಸ್ಥಳದಲ್ಲೇ ಕುಸಿದು ಬಿದ್ದರು. ಕೂಡಲೇ ನಾವು ಅವರನ್ನು ಕುಮಾರ್‌ಘಾಟ್ ಆಸ್ಪತ್ರೆಗೆ ಸಾಗಿಸಿದ್ದೇವೆ. ಅವರಲ್ಲಿ ಕೆಲವರನ್ನು ಚಿಕಿತ್ಸೆಗಾಗಿ ಕೈಲಾಶಹರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದರು.
ಸದ್ಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಘಟನೆಯ ಸ್ಥಳದಲ್ಲಿ ಪೊಲೀಸ್ ಮತ್ತು ಅರೆಸೇನೆ ಪಡೆಗಳ ತುಕಡಿಯನ್ನು ನಿಯೋಜಿಸಲಾಗಿದೆ. ಈ ದುರ್ಘಟನೆಯಲ್ಲಿ ಮೃತ ಸಂತ್ರಸ್ತರ ಕುಟುಂಬಗಳಿಗೆ ಮುಖ್ಯಮಂತ್ರಿ ಮಾಣಿಕ್ ಸಹಾ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಕುಮಾರ್‌ಘಾಟ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ರಥ ಎಳೆಯುವ ವೇಳೆ ವಿದ್ಯುತ್ ಸ್ಪರ್ಶದಿಂದ ಹಲವಾರು ಯಾತ್ರಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ದುಃಖಿತ ಕುಟುಂಬಗಳಿಗೆ ಆಳವಾದ ಸಂತಾಪ. ಅಲ್ಲದೇ, ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ಅವರ ಬೆಂಬಲಕ್ಕೆ ನಿಂತಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಜಗನ್ನಾಥ ರಥಯಾತ್ರೆ: ಪುರಿಯಲ್ಲಿ ಕಾಲ್ತುಳಿತದಿಂದ 14 ಜನರಿಗೆ ಗಾಯ... ಅಹಮದಾಬಾದ್‌ನಲ್ಲಿ ಓರ್ವ ಸಾವು, 31 ಮಂದಿಗೆ ಗಾಯ