ಔರಂಗಾಬಾದ್(ಬಿಹಾರ): ವೈದ್ಯಕೀಯ ಲೋಕದಲ್ಲೇ ಅಪರೂಪದ ಪ್ರಕರಣಗಳಲ್ಲಿ ಒಂದಾಗಿರುವ ಪ್ಲಾಸ್ಟಿಕ್ ಮಗುವೊಂದು ಬಿಹಾರದ ಔರಂಗಾಬಾದ್ನಲ್ಲಿ ಜನಸಿದೆ. ಇಲ್ಲಿನ ಸದರ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನವಜಾತ ಶಿಶುವಿಗೆ ಜನ್ಮ ನೀಡಿದ್ದು, ವಿಶೇಷ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದೇಶದಲ್ಲಿ ಜನಿಸುವ 11 ಲಕ್ಷ ಮಕ್ಕಳಲ್ಲಿ ಒಂದು ಕೊಲೊಡಿಯನ್ ಬೇಬಿ(ಪ್ಲಾಸ್ಟಿಕ್ ಮಗು) ಜನಿಸುತ್ತದೆ. ಇದೀಗ ಔರಂಗಾಬಾದ್ನಲ್ಲಿ ಈ ಮಗುವಿನ ಜನನವಾಗಿದ್ದು, ಪ್ರತ್ಯೇಕವಾಗಿರಿಸಿ ಜೀವ ರಕ್ಷಕ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅನುವಂಶಿಕ ಸಮಸ್ಯೆಯಿಂದಾಗಿ ಈ ರೀತಿಯ ಮಗುವಿನ ಜನನವಾಗುತ್ತದೆ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಮಗು ಹಾಗೂ ತಾಯಿ ಸುರಕ್ಷಿತವಾಗಿದ್ದು, ಮಗು ಎಷ್ಟು ದಿನ ಬದುಕುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನವಜಾತ ಶಿಶು ಘಟಕದ ವೈದ್ಯಾಧಿಕಾರಿ ಡಾ. ದಿನೇಶ್ ದುಬೆ ತಿಳಿಸಿದ್ದಾರೆ. ಜೊತೆಗೆ ಕೊಲೊಡಿಯನ್ ಮಗುವಿನ ಜನನ ವಿಶ್ವದ ಅಪರೂಪ ಕಾಯಿಲೆಗಳಲ್ಲಿ ಒಂದಾಗಿದೆ ಎಂದಿದ್ದಾರೆ.
ಇದನ್ನೂ ಓದಿರಿ: ಕುಡಿದ ಮತ್ತಿನಲ್ಲಿ ಜಗಳ.. ಸ್ನೇಹಿತನ ಮರ್ಮಾಂಗವನ್ನೇ ಕತ್ತರಿಸಿದ ಯುವಕ!
ಏನಿದು ಪ್ಲಾಸ್ಟಿಕ್ ಮಗು?
ಹುಟ್ಟುವ ಮಗುವಿನ ದೇಹದ ಚರ್ಮ ಸಂಪೂರ್ಣವಾಗಿ ಪ್ಲಾಸ್ಟಿಕ್ನಂತಿರುತ್ತದೆ. ಜೊತೆಗೆ ಮಗುವಿನ ಸಂಪೂರ್ಣ ದೇಹ ಪ್ಲಾಸ್ಟಿಕ್ನಂತಹ ಪದರದಿಂದ ಮುಚ್ಚಿರುತ್ತದೆ. ಹುಟ್ಟಿದ ಮಗು ಅಳಲು ಶುರು ಮಾಡುತ್ತಿದ್ದಂತೆ ಪದರ ಕ್ರಮೇಣವಾಗಿ ಒಡೆಯಲು ಶುರುವಾಗುತ್ತದೆ. ತಾಯಿಯ ಗರ್ಭದಲ್ಲಿ ಮಗು ಸಂಪೂರ್ಣವಾಗಿ ಬೆಳವಣಿಗೆ ಸಾಧ್ಯವಾಗದಿದ್ದರೆ ಇಂತಹ ಮಗುವಿನ ಜನನವಾಗುತ್ತದೆ. ಜೊತೆಗೆ ತಂದೆಯ ವೀರ್ಯದಲ್ಲಿನ ಸಮಸ್ಯೆಯಿಂದಾಗಿಯೂ ಸಹ ಇಂತಹ ಮಗು ಜನಿಸುವ ಸಾಧ್ಯತೆ ದಟ್ಟವಾಗಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ದಂಪತಿಗಳಿಗೆ ಹುಟ್ಟುವ ಮೊದಲ ಮಗು ಕೊಲೊಡಿಯನ್ನಿಂದ ಕೂಡಿದ್ದರೆ, ಎರಡನೇ ಮಗು ಸಹ ಇದೇ ರೀತಿಯ ಹುಟ್ಟುವ ಸಾಧ್ಯತೆ ಶೇ. 25ರಷ್ಟು ಇರುತ್ತದೆ. ಗರ್ಭಿಣಿಯಾದ ಮೂರು ತಿಂಗಳ ನಂತರ ಪರೀಕ್ಷೆ ಮಾಡಿಸಿ, ಇಂತಹ ಮಗು ಹುಟ್ಟುವುದನ್ನು ತಪ್ಪಿಸಬಹುದಾಗಿದೆ.