ಕಂಕೇರ್ (ಛತ್ತೀಸ್ಗಢ): ಅಪರೂಪದ ತರಕರಡಿ ಅಥವಾ ಹನಿ ಬ್ಯಾಡ್ಜರ್ ಪ್ರಾಣಿ ಛತ್ತೀಸ್ಗಢದ ಕಂಕೇರ್ ಜಿಲ್ಲೆಯ ದುಧ್ವಾ ಅರಣ್ಯ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ. ಈ ತರಕರಡಿಯನ್ನು ವಿಶ್ವದ ಅತ್ಯಂತ ನಿರ್ಭೀತ ಪ್ರಾಣಿಗಳಲ್ಲೊಂದು ಎಂದೇ ಹೇಳಲಾಗುತ್ತದೆ. ಹುಲಿಯೊಂದಿಗೂ ಕಾದಾಡುವ ಸಾಮರ್ಥ್ಯ ಇದಕ್ಕಿದೆ.
ಇಲ್ಲಿನ ಕೋಟಾಲಭಟ್ಟಿಯ ರಸ್ತೆಬದಿಯಲ್ಲಿ ಹನಿ ಬ್ಯಾಡ್ಜರ್ ಸ್ಥಳೀಯರ ಕಣ್ಣಿಗೆ ಬಂದಿದೆ. ಅಂತೆಯೇ, ಈ ಬಗ್ಗೆ ಅರಣ್ಯ ಇಲಾಖೆಗೆ ಜನರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ. ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ತರಕರಡಿ ಪತ್ತೆಯಾಗಿದೆ ಎಂದು ಎನ್ನಲಾಗುತ್ತಿದೆ.
ಇದನ್ನು ಅಳಿವಿನಂಚಿನಲ್ಲಿರುವ ವನ್ಯಜೀವಿ ಎಂದೂ ಪರಿಗಣಿಸಲಾಗಿದೆ. ಅತ್ಯಂತ ನಿರ್ಭೀತ ಜೀವಿಯಾದ ತರಕರಡಿ ಹೆಸರು ಗಿನ್ನೀಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲೂ ಸೇರಿದೆ. ಧೈರ್ಯಶಾಲಿ, ಕಠೋರ ಮತ್ತು ಕುತಂತ್ರ ಹಾಗೂ ಬುದ್ಧಿವಂತ ಪ್ರಾಣಿಯೂ ಆಗಿದೆ. ಕೋಣೆಯಲ್ಲಿ ಕೂಡಿ ಹಾಕಿದರೂ ಮುರಿದು ಹೊರ ಬರುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಅಶೋಕ್ ಬಜಪೈ ಮಾಹಿತಿ ನೀಡಿದರು.
ಮನುಷ್ಯನಂತೆಯೂ ಈ ಪ್ರಾಣಿ ಯೋಚಿಸಬಲ್ಲದು. ಮೊದಲಿಗೆ ತಾನಿರುವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತದೆ. ನಂತರ ತಪ್ಪಿಸಿಕೊಳ್ಳುವ ಯೋಜನೆ ರೂಪಿಸುತ್ತದೆ. ಕೋಣೆಗೆ ಬೀಗ ಹಾಕಿದರೂ ಅದನ್ನು ತೆರೆಯುವ ಚತುರತೆ ಹೊಂದಿದೆ. ಇಲ್ಲವೇ, ಗೋಡೆ ಕೊರೆದು ಅಥವಾ ನೆಲ ಅಗೆದು ಸುರಂಗ ಮಾಡಿಯಾದರೂ ತಪ್ಪಿಸಿಕೊಳ್ಳುತ್ತದೆ. ಇದಕ್ಕೆ ಈ ಪ್ರಾಣಿಯ ಗಟ್ಟಿಯಾದ ದವಡೆ ಮತ್ತು ದಪ್ಪದ ಚರ್ಮ ಅನುಕೂಲಕರವಾಗಿದೆ. ದುಧ್ವಾ ಅರಣ್ಯ ಸಮೀಪದಲ್ಲೇ ಸೀತಾನದಿ ಅಭಯಾರಣ್ಯ ಇರುವುದರಿಂದ ಅಲ್ಲಿಂದ ಈ ಪ್ರಾಣಿ ಬಂದಿರುವ ಸಾಧ್ಯತೆ ಎಂದು ಬಜಪೈ ತಿಳಿಸಿದರು.
ಇದನ್ನೂ ಓದಿ: ಕಾಡಾನೆ ದಾಳಿಗೆ ವ್ಯಕ್ತಿ ದೇಹ ಛಿದ್ರ ಛಿದ್ರ.. ಬೆಳಗ್ಗೆಯವರೆಗೂ ಸತ್ತ ಮನುಷ್ಯನ ಬಳಿಯೇ ಬಿಡು ಬಿಟ್ಟಿದ್ದ ಗಜಪಡೆ