ಶಹಜಹಾನ್‌ಪುರ(ಉತ್ತರ ಪ್ರದೇಶ): ಸುಮಾರು 28 ವರ್ಷಗಳ ನಂತರ ಇಬ್ಬರು ಸಹೋದರರ ಮೇಲೆ ಅತ್ಯಾಚಾರ ದೂರು ದಾಖಲಾಗಿ, ಅತ್ಯಾಚಾರ ಪ್ರಕರಣ ಸಾಬೀತಾಗಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಬೆಳಕಿಗೆ ಬಂದಿದೆ. ಸುಮಾರು 2 ವರ್ಷಗಳ ಕಾಲ ಇಬ್ಬರು ಸಹೋದರರಿಂದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು, ಈಗ ಆರೋಪ ಸಾಬೀತಾಗಿದೆ.
ಶಹಜಹಾನ್‌ಪುರದಲ್ಲಿ 1994ರಿಂದ 1996ರವರೆಗೆ ಸುಮಾರು 2 ವರ್ಷಗಳ ಕಾಲ ಇಬ್ಬರು ಸಹೋದರರು ನೆರೆ ಮನೆಯ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸಂತ್ರಸ್ತೆ ಗರ್ಭಿಣಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು. ಯಾವುದೇ ದೂರು ದಾಖಲಿಸದಂತೆ ಆರೋಪಿಗಳು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರು. ಆ ಮಗುವನ್ನು ತಮಗೇ ಕೊಟ್ಟು ಬಿಡಲು ಆರೋಪಿಗಳು ಒತ್ತಾಯಿಸಿದ್ದರು. ನಂತರ ಆ ಮಗುವನ್ನು ಉತ್ತರ ಪ್ರದೇಶದ ದಂಪತಿ ದತ್ತು ತೆಗೆದುಕೊಂಡಿದ್ದರು.
2020ರಲ್ಲಿ ಸಂತ್ರಸ್ತೆ ತನ್ನ ಮಗನನ್ನು ಭೇಟಿಯಾಗಿದ್ದು, ಆಗ ಆಕೆಯ ಮಗ ಆರೋಪಿ ಸಹೋದರರ ವಿರುದ್ಧ ಕಾನೂನು ಹೋರಾಟ ಮಾಡುವಂತೆ ಸಲಹೆ ನೀಡಿದ್ದನು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿ ಕಾನೂನು ಹೋರಾಟ ಆರಂಭವಾಗಿದ್ದು, ಸಂತ್ರಸ್ತೆಯ ಮಗನ ಡಿಎನ್ಎ ಪರೀಕ್ಷೆ ನಡೆಸಲಾಗಿದ್ದು, ಆರೋಪಿ ಸಹೋದರರಲ್ಲಿ ಒಬ್ಬರು ನಿಜವಾಗಿಯೂ ಸಂತ್ರಸ್ತೆಯ ಮಗನ ತಂದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮೂಲಕ ಸಂತ್ರಸ್ತೆಯ ಆರೋಪ ಪ್ರಬಲವಾಗಿದೆ.
ನಾವು ಈ ಕಾನೂನು ಹೋರಾಟವನ್ನು ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಸಾಕಷ್ಟು ನೋವು ಅನುಭವಿಸಿದ ನನ್ನ ತಾಯಿಗೆ ನ್ಯಾಯವನ್ನು ಒದಗಿಸುತ್ತೇನೆ ಎಂದು ಸಂತ್ರಸ್ತೆಯ ಮಗ ಹೇಳಿದ್ದು, ಮುಂದಿನ ದಿನಗಳಲ್ಲಿ ಈ ಹೋರಾಟ ಹೇಗಿರಲಿದೆ ಎಂದು ಕಾದುನೋಡಬೇಕಿದೆ.
ಇದನ್ನೂ ಓದಿ: 'ಮದುವೆ ಉದ್ದೇಶದೊಂದಿಗೆ ಸಹಮತದ ದೈಹಿಕ ಸಂಬಂಧ ಲೈಂಗಿಕ ದೌರ್ಜನ್ಯವಲ್ಲ'