ಟೋಂಕ್ (ರಾಜಸ್ಥಾನ): ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ಮತ್ತು ಆಕೆಯ ತಾಯಿಯನ್ನು ಬೆತ್ತಲೆ ಮಾಡಿ, ಹಲ್ಲೆ ಮಾಡಿದ ಆರೊಪದ ಹಿನ್ನೆಲೆ ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಐದು ಜನರನ್ನು ಬಂಧಿಸಲಾಗಿದೆ.
ಪಚೆವಾರ್ ಗ್ರಾಮದಲ್ಲಿ ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಚಿತ್ರಹಿಂಸೆ ನೀಡಿ ಥಳಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಈ ಸಂಬಂಧ ಪ್ರತಿಕ್ರಿಯಿಸಿದ ಪ್ರಕರಣದ ತನಿಖಾಧಿಕಾರಿ ಮಾಲ್ಪುರಾ ಉಪ ಪೊಲೀಸ್ ವರಿಷ್ಠಾಧಿಕಾರಿ ಚಕ್ರವರ್ತಿ ಸಿಂಗ್ ರಾಥೋಡ್, ತಾಯಿ - ಮಗಳು ಫೆಬ್ರವರಿ 15 ರಂದು ಪಚೆವಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದರು. 17 ವರ್ಷದ ಸಂತ್ರಸ್ತೆಯನ್ನು ಯುವಕನೋರ್ವ ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದ ಎಂದು ದೂರು ನೀಡಿದ್ದರು. ಈ ವಿಚಾರವನ್ನು ಬಗೆಹರಿಸಿಕೊಳ್ಳುವ ನೆಪದಲ್ಲಿ ಆರೋಪಿ ಕಡೆಯವರು ತಾಯಿ-ಮಗಳನ್ನು ತಾವಿದ್ದಲ್ಲಿಗೆ ಕರೆಸಿದ್ದಾರೆ. ಸಂತ್ರಸ್ತೆ ತನ್ನ ಅಮ್ಮನೊಂದಿಗೆ ಅಲ್ಲಿಗೆ ತೆರಳಿದ ಬಳಿಕ ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಂಕರ್ ಬಿದರಿ ಇಮೇಲ್ ಖಾತೆ ಹ್ಯಾಕ್ ಮಾಡಿದ ಖದೀಮರು ಅರೆಸ್ಟ್!
ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿದೆ. ಆರೋಪಿ ತನ್ನ ಮೇಲೆ ಮೂರು ಬಾರಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಆರೋಪಿ ಈಗಾಗಲೇ ಮದುವೆಯಾಗಿದ್ದಾನೆ. ನಾವು ಎಲ್ಲ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಚಕ್ರವರ್ತಿ ಸಿಂಗ್ ರಾಥೋಡ್ ತಿಳಿಸಿದ್ದಾರೆ.