ನವದೆಹಲಿ: ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ. ಬೆಂಗಳೂರಲ್ಲಿ 1998ರ ಫೆ.28ರಂದು ವಿಧವೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಉಮೇಶ ರೆಡ್ಡಿ ತಪ್ಪಿತಸ್ಥ ಎಂದು ಬೆಂಗಳೂರು ಕೋರ್ಟ್ ತೀರ್ಪು ನೀಡಿ, ಮರಣದಂಡಣೆ ವಿಧಿಸಿತ್ತು.
ಬಳಿಕ ರಾಷ್ಟ್ರಪತಿಗಳಿಗೆ ಉಮೇಶ್ ರೆಡ್ಡಿ ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದರು. 2013ರಲ್ಲಿ ಮೇ 12 ರಂದು ರಾಷ್ಟ್ರಪತಿಗಳು, ಉಮೇಶ್ ರೆಡ್ಡಿ ಅರ್ಜಿಯನ್ನು ತಿರಸ್ಕರಿಸಿದ್ದರು. ಬಳಿಕ ಉಮೇಶ್ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ ಹೈಕೋರ್ಟ್ 2021ರಲ್ಲಿ ಗಲ್ಲು ಶಿಕ್ಷೆ ಎತ್ತಿಹಿಡಿದು ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಈತ ಸುಪ್ರೀಂ ಮೆಟ್ಟಿಲೇರಿದ್ದ.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಯು ಯು ಲಲಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಗಲ್ಲು ಶಿಕ್ಷೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಉಮೇಶ್ ರೆಡ್ಡಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
10 ವರ್ಷ ಏಕಾಂಗಿ ಸೆರೆಮಾನ ವಾಸ: ಏಕಾಂಗಿ ಸೆರೆಮನೆಯಲ್ಲಿ ಅಪರಾಧಿಯ ಸೆರೆವಾಸವು ಅವನ ಯೋಗಕ್ಷೇಮದ ಮೇಲೆ ಕೆಟ್ಟ ಪರಿಣಾಮಗಳನ್ನು ತೋರಿಸುತ್ತದೆ ಎಂದು ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. 1998ರಲ್ಲಿ ಬೆಂಗಳೂರಿನಲ್ಲಿ ವಿಧವೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬಿಎ ಉಮೇಶ್, ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಿತು.
ಈ ಪ್ರಕರಣದಲ್ಲಿ, 2006 ರಲ್ಲಿ ಮೇಲ್ಮನವಿದಾರನಿಗೆ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಈ ಪ್ರಕರಣಕ್ಕೆ ಸಂಬಂಧ ಅಪರಾಧಿ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ ಈ ಅರ್ಜಿಯನ್ನು ಅಂತಿಮವಾಗಿ ಮೇ 12, 2013 ರಂದು ರಾಷ್ಟ್ರಪತಿಗಳು ವಿಲೇವಾರಿ ಮಾಡಿದ್ದರು. ಇನ್ನು ಈವರೆಗೆ ಅಂದರೆ ಉಮೇಶ್ ರೆಡ್ಡಿ 10 ವರ್ಷಗಳ ಕಾಲ ಏಕಾಂತ ಸೆರೆವಾಸ ಅನುಭವಿಸಿದ್ದಾನೆ ಎಂದು ಪೀಠ ಹೇಳಿದೆ.
ಪ್ರತಿಕ್ಷಣವೂ ಸಾವಿನ ನೆನಪಲ್ಲಿ ಬದುಕು: 2006 ರಿಂದ 2013 ರವರೆಗೆ ಕಾನೂನಿನ ಅನುಮತಿಯಿಲ್ಲದೇ ಹಾಗೂ ನ್ಯಾಯಾಲಯವು ನಿಗದಿಪಡಿಸಿದ ತತ್ವಗಳಿಗೆ ಇದು ವಿರುದ್ಧವಾಗಿದೆ. ಏಕಾಂತದ ಅವಧಿಯು ಸುಮಾರು 10 ವರ್ಷಗಳವರೆಗೆ ಇರುತ್ತದೆ. 2006 ರಿಂದ 2013 ರಲ್ಲಿ ಕ್ಷಮಾದಾನ ಅರ್ಜಿಯ ವಿಲೇವಾರಿವರೆಗೆ ಹಾಗೂ ರಾಷ್ಟ್ರಪತಿಗಳು ಕ್ಷಮಾದಾನ ತಿರಸ್ಕರಿಸಿದ ಬಳಿಕ 2016ರವರೆಗೂ ಉಮೇಶ್ ಏಕಾಂತ ಸೆರೆಮನೆ ವಾಸ ಅನುಭವಿಸಿದ್ದಾನೆ ಎಂದು ಯು ಯು ಲಲಿತ್ ನೇತೃತ್ವದ ತ್ರಿ ಸದಸ್ಯ ನ್ಯಾಯ ಪೀಠ ಹೇಳಿದೆ.
ಒಂಟಿ ಜೈಲಿನಲ್ಲಿ 10 ವರ್ಷಗಳ ಕಾಲ ಉಮೇಶ್ ರೆಡ್ಡಿ ಶಿಕ್ಷೆ ಅನುಭವಿಸಿದ್ದು, ಇದು ಕಾನೂನುಬಾಹಿರ. ಈ ಕಾರಾಗೃಹ ಶಿಕ್ಷೆ ಅರ್ಜಿದಾರರ ಆರೋಗ್ಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆದ್ದರಿಂದ ಅರ್ಜಿದಾರರ ಶಿಕ್ಷೆಯನ್ನು ಮರಣದಂಡನೆಯಿಂದ ಜೀವಾವಧಿ ಶಿಕ್ಷೆಯಾಗಿ ಬದಲಾಯಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಉಮೇಶ್ ರೆಡ್ಡಿಯದ್ದು ಭಯಾನಕ ಇತಿಹಾಸ: ವಿಕೃತ ಕಾಮಿ ಉಮೇಶ ರೆಡ್ಡಿಯ ಭಯಾನಕ ಕರಾಳ ಇತಿಹಾಸ ಹೊಂದಿದ್ದಾನೆ. ಉಮೇಶ್ ರೆಡ್ಡಿ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ಒಂಟಿ ಮಹಿಳೆಯರಿದ್ದ ಮನೆಗೆ ನುಗ್ಗುತ್ತಿದ್ದ. ರೂಮಿನಲ್ಲಿ ಮಹಿಳೆಯನ್ನು ಕೂಡಿ ಹಾಕಿ ಬೆತ್ತಲೆ ಮಾಡಿ ಅತ್ಯಾಚಾರ ಮಾಡಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಬಹಳಷ್ಟು ಮಂದಿ ಮರ್ಯಾದೆಗೆ ಅಂಜಿ ದೂರು ನೀಡುತ್ತಿರಲಿಲ್ಲ ಎಂದು ತನಿಖಾಧಿಕಾರಿಗಳು ಹೇಳುತ್ತಿದ್ದಾರೆ.
ಯಾರೀತ ಉಮೇಶ್ ರೆಡ್ಡಿ: 1969ರಲ್ಲಿ ಚಿತ್ರದುರ್ಗದಲ್ಲಿ ಉಮೇಶ್ ರೆಡ್ಡಿ ಜನಿಸಿದ್ದಾನೆ. ಈತನ ಮೂಲ ಹೆಸರು ಬಿಎ ಉಮೇಶ್. ಸಿಆರ್‌ಪಿಎಫ್‌ಗೆ ಆಯ್ಕೆಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ ಅನುಭವ ಈತನಿಗಿದೆ. ಸೈನಿಕನಾಗಿ ವೃತ್ತಿ ಜೀವನ ಆರಂಭಿಸಿದ ಉಮೇಶ್ ರೆಡ್ಡಿ, ಬಳಿಕ ಪೊಲೀಸ್ ಆಗಿ ಸೇವೆ ಸಲ್ಲಿಸಿದ್ದಾನೆ. ಅದಾದ ಬಳಿಕ ಕೆಲಸ ಬಿಟ್ಟು ಬೇರೆ ಬೇರೆ ಕಾಯಕಗಳನ್ನು ಮಾಡಿದ್ದಾನೆ.
ಕೇಸ್ಗಳ ಸರಮಾಲೆ.. 9 ಪ್ರಕರಣಗಳಲ್ಲಿ ಶಿಕ್ಷೆ: ಈತನ ವಿರುದ್ಧ ಬರೋಬ್ಬರಿ 18 ಕೊಲೆ, ಕನಿಷ್ಠ 20 ಅತ್ಯಾಚಾರ ಪ್ರಕರಣಗಳಿವೆ. 9 ಪ್ರಕರಣಗಳಲ್ಲಿ ಈತನಿಗೆ ಕೋರ್ಟ್ಗಳು ಶಿಕ್ಷೆ ವಿಧಿಸಿವೆ. ಈತನ ಕೃತ್ಯಗಳು ಕರ್ನಾಟವಲ್ಲದೆ, ಮಹಾರಾಷ್ಟ್ರ, ಗುಜರಾತ್‌ನಲ್ಲೂ ಬೆಳಕಿಗೆ ಬಂದಿವೆ. ಇನ್ನೂ ಕೆಲವು ಪ್ರಕರಣಗಳು ಹೊರ ಜಗತ್ತಿಗೆ ಗೊತ್ತಾಗಿಲ್ಲ ಎನ್ನುವುದು ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳ ಮಾತು.
ಇದನ್ನು ಓದಿ:ಹಾಡಹಗಲೇ ಶಿವಸೇನೆ ಹಿಂದೂಸ್ತಾನ್ ಮುಖ್ಯಸ್ಥನಿಗೆ ಗುಂಡಿಕ್ಕಿ ಕೊಲೆ