ಹೈದರಾಬಾದ್: ಪ್ರಿಯತಮೆ ಮೋಸ ಮಾಡಿದ್ದಾಳೆ ಎಂದು ಆಕೆಯ ಮೇಲೆ ಮನಬಂದಂತೆ ಚಾಕುವಿನಿಂದ ಹಲ್ಲೆ ಮಾಡಿದ್ದ ಆರೋಪಿ ಬಸವರಾಜು ಎಂಬಾತನನ್ನು ಬಂಧಿಸಲಾಗಿದ್ದು, ಪೊಲೀಸರು ರಂಗಾರೆಡ್ಡಿ ನ್ಯಾಯಾಲಯಕ್ಕೆ (Rangareddy Court) ಹಾಜರುಪಡಿಸಿದ್ದರು. ಈಗ ನ್ಯಾಯಾಲಯ ಆತನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರು ಬಸವರಾಜುನನ್ನು ಚರ್ಲಪಲ್ಲಿ ಜೈಲಿಗೆ (Charlapalli jail) ಸ್ಥಳಾಂತರಿಸಿದ್ದಾರೆ.
ಪ್ರಿಯಕರ ಬಸವರಾಜುನಿಂದ ಗಾಯಗೊಂಡಿರುವ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 24 ಗಂಟೆಗಳ ನಂತರವೇ ಆಕೆಯ ಆರೋಗ್ಯ ಸ್ಥಿತಿ ಬಗ್ಗೆ ಹೇಳಬಹುದು ಎಂದಿದ್ದಾರೆ. ಸಂತ್ರಸ್ತೆ ಶಿರೀಷಾ ಪೋಷಕರು ಮತ್ತು ಸಹೋದರ ಆಸ್ಪತ್ರೆಗೆ ತಲುಪಿದ್ದು, ಆರೋಪಿಗಳನ್ನು ಶಿಕ್ಷಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ವಿವರ:
ವಿಕಾರಾಬಾದ್ ಜಿಲ್ಲೆಯ (Vikarabad District) ದೌಲ್ತಾಬಾದ್ ತಾಲೂಕಿನ ಗ್ರಾಮವೊಂದರ ನಿವಾಸಿ 20 ವರ್ಷದ ಯುವತಿ ಮತ್ತು ತಿಮ್ಮರೆಡ್ಡಿಪಲ್ಲಿ ಗ್ರಾಮದಲ್ಲಿ ವಾಸಿಸುವ ಬಸವರಾಜ್ (23) ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿ ವಿಷಯ ಪೋಷಕರಿಗೆ ತಿಳಿದಿದ್ದು, ಇವರ ಮದುವೆಗೆ ನಿರಾಕರಿಸಿದ್ದರು. ಇನ್ನು ಯುವತಿಯ ಪೋಷಕರು ಬೇರೊಬ್ಬ ಯುವಕನೊಂದಿಗೆ ತಮ್ಮ ಮಗಳ ಮದುವೆ ನಿಶ್ಚಯಿಸಿದ್ದರು. ಅದರಂತೆ ಅವರಿಬ್ಬರಿಗೂ ನಿಶ್ಚಿತಾರ್ಥವೂ ನಡೆದಿತ್ತು. ಬೇರೊಬ್ಬ ಯವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ಯುವತಿಯನ್ನು ಎಲ್ಬಿ ನಗರ ಪೊಲೀಸ್ ಠಾಣಾ (LB Nagar Police Station) ವ್ಯಾಪ್ತಿಯ ಹಸ್ತಿನಾಪುರಂನಲ್ಲಿರುವ ಆಕೆಯ ಚಿಕ್ಕಪ್ಪನ ಮನೆಯಲ್ಲಿ ಇರಿಸಲಾಗಿತ್ತು.
ಈ ವಿಚಾರ ಬಸವರಾಜ್‌ಗೆ ತಿಳಿದಿದೆ. ಬುಧವಾರ ಯುವತಿ ಇದ್ದ ಸ್ಥಳಕ್ಕೆ ಬಸವರಾಜ್ ತೆರಳಿದ್ದಾನೆ. ಮನೆಯಲ್ಲಿ ಯುವತಿ ಒಂಟಿಯಾಗಿರುವುದನ್ನು ಗಮನಿಸಿದ ಬಸವರಾಜ್ ಕೊನೆಯ ಬಾರಿ ಭೇಟಿಯಾಗೋಣ ಬಾ ಎಂದು ಆಕೆಯ ಮೊಬೈಲ್ಗೆ ಸಂದೇಶ ಕಳುಹಿಸಿದ್ದಾನೆ. ಅದರಂತೆ ಯುವತಿ ಬಸವರಾಜ್ ಭೇಟಿಯಾಗಲು ಬಂದಿದ್ದಾಳೆ.
ಯುವತಿ ಮನೆಯಿಂದ ಹೊರಗೆ ಬಂದ ನಂತರ ತನ್ನನ್ನು ಮದುವೆಯಾಗುವಂತೆ ಬಸವರಾಜ್ ಮನವಿ ಮಾಡಿಕೊಂಡಿದ್ದಾನೆ. ಆದರೆ, ಯುವತಿ ಬಸವರಾಜ್ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಬಸವರಾಜ್ ಆಕೆಗೆ 18 ಬಾರಿ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದ.
ಇದನ್ನೂ ಓದಿ: ಪ್ರಿಯಕರನ ಬಿಟ್ಟು ಬೇರೆ ಯುವಕನೊಂದಿಗೆ ಮದುವೆಗೆ ರೆಡಿಯಾದ ಯುವತಿ.. ಮೋಸ ಹೋದ ಪ್ರೇಮಿಯಿಂದ 18 ಬಾರಿ ಚಾಕು ಇರಿತ