ಹೈದರಾಬಾದ್ (ತೆಲಂಗಾಣ): ಪ್ರವಾಸಿಗರ ಸ್ವರ್ಗ ರಾಮೋಜಿ ಫಿಲ್ಮ್ ಸಿಟಿಗೆ ತೆಲಂಗಾಣ ರಾಜ್ಯ ಪ್ರವಾಸೋದ್ಯಮ- 2021 ರ ಪ್ರಶಸ್ತಿ ಲಭಿಸಿದೆ. ಪ್ರವಾಸಿಗರಿಗಾಗಿ ಉತ್ತಮ ಸೇವೆ ನೀಡಿದ್ದಕ್ಕಾಗಿ ರಾಮೋಜಿ ಫಿಲ್ಮ್ ಸಿಟಿಗೆ ‘ಪ್ರವಾಸಿಗರಿಗೆ ಉತ್ತಮ ನಾಗರಿಕ ಸೇವೆಗಳ ನಿರ್ವಹಣೆ’(Better Civil Services Management for Tourists) ವಿಭಾಗದಲ್ಲಿ ಪ್ರಶಸ್ತಿ ಬಂದಿದೆ.
ಜತೆಗೆ ಫೋರ್ ಸ್ಟಾರ್ ಹೋಟೆಲ್(2020) ವಿಭಾಗದಲ್ಲಿ ಡಾಲ್ಫಿನ್ ಸಮೂಹದ ಸಿತಾರ ಹೋಟೆಲ್‌ಗೆ ಪ್ರಶಸ್ತಿ ಲಭಿಸಿದೆ. ವಿಶ್ವ ಪ್ರವಾಸ ದಿನಾಚರಣೆ ಹಿನ್ನೆಲೆ, ನಿನ್ನೆ (ಸೆಪ್ಟೆಂಬರ್ 27) ಸಂಜೆ ನಾಲ್ಕು ಗಂಟೆಗೆ ಹೈದರಾಬಾದ್ನ ಬೇಗಂಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ತೆಲಂಗಾಣದ ಕ್ರೀಡೆ ಮತ್ತು ಅಬಕಾರಿ ಸಚಿವ ವಿ.ಶ್ರೀನಿವಾಸ ಗೌಡರು ಪ್ರಶಸ್ತಿ ಪ್ರದಾನ ಮಾಡಿದರು.
ಉಳಿದಂತೆ ಫೈವ್ ಸ್ಟಾರ್ ಹೋಟೆಲ್ ಡಿಲಕ್ಸ್ ವಿಭಾಗದಲ್ಲಿ ವೆಸ್ಟಿನ್ ಹೋಟೆಲ್, ಫೈವ್ ಸ್ಟಾರ್ ವಿಭಾಗದಲ್ಲಿ ಬಂಜಾರ ಹಿಲ್ಸ್ ಪಾರ್ಕ್ ಹೈಯರ್ ಹೋಟೆಲ್, ನಗರದ ಹೊರ ವಲಯದಲ್ಲಿ ಗೋಲ್ಕೊಂಡ ರೆಸಾರ್ಟ್ ಪಂಚತಾರಾ ಹೋಟೆಲ್‌ಗೆ ಪ್ರಶಸ್ತಿ ಸಿಕ್ಕಿದೆ.
ಫೋರ್ಸ್ಟಾರ್ ಹೋಟೆಲ್ ವಿಭಾಗದಲ್ಲಿ ಬಂಜಾರ ಹಿಲ್ಸ್ನ ದಸ್ಪಲ್ಲ ಹೋಟೆಲ್ ಹಾಗೂ ಹೈದರಾಬಾದ್ ನಗರದ ಹೊರವಲಯದಲ್ಲಿ ಮೃಗವಾಣಿ ಹೋಟೆಲ್‌ಗೆ ಪ್ರಶಸ್ತಿ ಲಭಿಸಿದೆ.
ತ್ರೀ ಸ್ಟಾರ್ ಹೋಟೆಲ್ ವಿಭಾಗದಲ್ಲಿ ಲಕ್ಡಿ ಕಾ ಪೂಲ್‌ನಲ್ಲಿರುವ ವೆಸ್ಟರ್ನ್ ಅಶೋಕ ಹೋಟೆಲ್‌ಗೆ ಪ್ರಶಸ್ತಿ ದೊರೆತಿದೆ. ನೊವಾಟೆಲ್ ಮತ್ತು HICC ಕಾಂಪ್ಲೆಕ್ಸ್ ಅನ್ನು ಅತ್ಯುತ್ತಮ ಕನ್ವೆನ್ಶನ್ ಸೆಂಟರ್‌ಗಳಾಗಿ ಆಯ್ಕೆ ಮಾಡಲಾಗಿದ್ದು, ನಿನ್ನೆ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಸಿರು ಹೋಟೆಲ್ ವಿಭಾಗದಲ್ಲಿ ತಾರಾಮತಿ ಬರದಾರಿಗೆ ಮೊದಲ ಬಹುಮಾನ. ರಾಮಪ್ಪ ಹರಿತಾ ಹೋಟೆಲ್‌ಗೆ ಎರಡನೇ ಬಹುಮಾನ ಮತ್ತು ಅಲಿಸಾಗರದ ಹರಿತಾ ಲೇಕ್ ವ್ಯೂ ರೆಸಾರ್ಟ್ ತೃತೀಯ ಬಹುಮಾನ ಪಡೆದಿವೆ. ತೆಲಂಗಾಣ ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಕೆಲಸ ಮಾಡುವ ಪಾಲುದಾರರಿಗೆ ಒಟ್ಟು 16 ವಿಭಾಗಗಳಲ್ಲಿ 20 ಪ್ರಶಸ್ತಿಗಳನ್ನು ಘೋಷಿಸಿತ್ತು.
ಸಮಾರಂಭದಲ್ಲಿ ಮಾತನಾಡಿದ ಸಚಿವ ಶ್ರೀನಿವಾಸಗೌಡ, ಇಡೀ ದೇಶದಲ್ಲಿಯೇ ರಾಜ್ಯವು ಅತ್ಯಂತ ಸುಂದರವಾದ ಸ್ಥಳಗಳನ್ನು ಹೊಂದಿದೆ ಎಂದರು. ರಾಜ್ಯದ ಐತಿಹಾಸಿಕ ತಾಣಗಳನ್ನು ಹೈಲೈಟ್ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿಡಿಯೋಗಳನ್ನು ಬಿಡುಗಡೆ ಮಾಡಿದರು.
ರಾಮೋಜಿ ಫಿಲ್ಮ್ ಸಿಟಿಯ ಪ್ರತಿನಿಧಿಗಳು ವಿಶ್ವ ಪ್ರವಾಸೋದ್ಯಮ ಆಚರಣೆಯ ಅಂಗವಾಗಿ ನೀಡಲಾದ ಈ ಪ್ರಶಸ್ತಿಗಳನ್ನು ಸ್ವೀಕರಿಸಿದ್ರು. ಬಳಿಕ ಮಾತನಾಡಿದ ರಾಮೋಜಿ ಫಿಲ್ಮ್ ಸಿಟಿ ಉಪಾಧ್ಯಕ್ಷ ಕೆ.ವೆಂಕಟರತ್ನಂ ಅವರು, ಅಕ್ಟೋಬರ್ 8, 2021 ರಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ ಎಂದರು.
ಡಾಲ್ಫಿನ್ ಹೊಟೇಲ್ ಜನರಲ್ ಮ್ಯಾನೇಜರ್ ಟಿ.ಆರ್.ಎಲ್ ರಾವ್ ಮಾತನಾಡಿ, ಸಿತಾರಾ ಹೋಟೆಲ್ನಲ್ಲಿ ವಿಶ್ವದರ್ಜೆಯ ಊಟ ಮತ್ತು ಅತಿಥಿ ಹೋಸ್ಟಿಂಗ್ ಸೌಲಭ್ಯಗಳನ್ನು ಒದಗಿಸಿದ್ದಕ್ಕಾಗಿ ಗೌರವಿಸಲಾಗಿದೆ. ತೆಲಂಗಾಣ ಸರ್ಕಾರವು ನಮ್ಮ ಸೇವೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ಖುಷಿಯಾಗಿದೆ ಎಂದ್ರು.